ಬೆಂಗಳೂರು: ನಗರದಲ್ಲಿ ಡ್ರಗ್ಸ್ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಈತ ಅಡುಗೆ ಮನೆಯಲ್ಲಿಯೇ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬೆಂಜಮಿನ್ ಎಂಬ ವ್ಯಕ್ತಿ ಅವಲಹಳ್ಳಿಯ ತನ್ನ ಮನೆಯಲ್ಲಿ ಕಚ್ಚಾ ಪದಾರ್ಥ ಬಳಸಿಕೊಂಡು ಸ್ಟೌ ಮೇಲೆ ಬೆಂಕಿ ಹೊತ್ತಿಸಿ, ದೋಸೆಯ ರೀತಿ ಮಾಡಿಕೊಳ್ಳುತ್ತಿದ್ದ. ನಂತರ ಪ್ರೆಶರ್ ಕುಕ್ಕರ್ ಗೆ (Pressure Cooker) ಪೈಪ್ ಅಳವಡಿಸಿ ಆವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ಎಂಡಿಎಂಎ (MDMA) ತಯಾರು ಮಾಡುತ್ತಿದ್ದ ಎನ್ನಲಾಗಿದೆ.
ಈತ ರಾಮಮೂರ್ತಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧನದ ಸಂದರ್ಭದಲ್ಲಿ ಆತನ ಬಳಿ 100 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆತ ಇದನ್ನು ಎಲ್ಲಿಂದ ತರುತ್ತಿದ್ದಾನೆ ಎಂಬುವುದನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬೆಂಜಮಿನ್ ವಾಸವಿದ್ದ ಮನೆಯಲ್ಲಿಯೇ ಎಂಡಿಎಂಎ ಕ್ರಿಸ್ಟಲ್ ತಯಾರಿಸುತಿದ್ದ ವಿಚಾರ ಬೆಳಕಿಗೆ ಬಂದಿದೆ.
ಕಚ್ಚಾ ವಸ್ತುಗಳನ್ನು ಖರೀದಿ ಮಾಡುತ್ತಿದ್ದ ಆರೋಪಿ ನಂತರ ಹಂತ ಹಂತವಾಗಿ ಎಂಡಿಎಂಎ ತಯಾರು ಮಾಡುತ್ತಿದ್ದ. ನಂತರ ಕೇವಲ ನೈಜೀರಿಯಾ ಮತ್ತು ಆಫ್ರಿಕಾ ಮೂಲದವರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸುಮಾರು 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮತ್ತು ಅದನ್ನು ತಯಾರು ಮಾಡಲು ಬೇಕಾಗಿದ್ದ 5 ಕೆಜಿ ಕಚ್ಚಾವಸ್ತುಗಳನ್ನು ಅಧಿಕಾರಿಗಳು ಸದ್ಯ ವಶಕ್ಕೆ ಪಡೆದಿದ್ದಾರೆ.