No-Confidence Motion : ಇಮ್ರಾನ್ ಖಾನ್ ಕೌಂಟ್ ಡೌನ್ ಶುರು..!
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕೊನೆಯ ಎಸೆತದವರೆಗೂ ಆಟ ಮುಂದುವರಿಸುತ್ತೇನೆ ಎಂದಿದ್ದ ಆಲ್ ರೌಂಡರ್ ಗೆ ಸ್ವಂತ ಪಕ್ಷದಲ್ಲೇ ಆಘಾತ ಎದುರಾಗಿದೆ.
ಇಮ್ರಾನ್ ಖಾನ್ ವಿರುದ್ಧ ಸ್ವಂತ ಪಕ್ಷದವರೇ ಧ್ವನಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಬೆಂಬಲ ನೀಡಿದ್ದ ಪಕ್ಷಗಳನ್ನು ಹೇಗೆ ತಮ್ಮ ಪರ ವಾಲುವಂತೆ ಮಾಡಿಕೊಳ್ಳುತ್ತಾರೆ ಅನ್ನೋದು ಅಂದಾಜಿಸಲಾಗುತ್ತಿಲ್ಲ.
ವಿರೋಧ ಪಕ್ಷವಾದ ಪಿಎಂಎಲ್-ಎನ್ ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ಮಾರ್ಚ್ 31 ರಂದು ಚರ್ಚಿಸಲಾಗುವುದು ಮತ್ತು ಏಪ್ರಿಲ್ 3 ರಂದು ಮತ ಚಲಾಯಿಸಲಾಗುವುದು ಎಂದು ಗೃಹ ಸಚಿವ ಶೇಖ್ ರಶೀದ್ ಹೇಳಿದ್ದಾರೆ.
ಇದರೊಂದಿಗೆ ಇಮ್ರಾನ್ ಅವರು ಪಾಕಿಸ್ತಾನದ ಇತಿಹಾಸದಲ್ಲಿ ಅವಿಶ್ವಾಸವನ್ನು ಎದುರಿಸಿದ ಮೂರನೇ ಪ್ರಧಾನಿಯಾಗಲಿದ್ದಾರೆ.
ಯಾಕೀ ಅವಿಶ್ವಾಸ ನಿರ್ಣಯ..?
ನವ ಪಾಕಿಸ್ತಾನವನ್ನು ನಿರ್ಮಿಸುವುದಾಗಿ 2018 ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಅವರ ಪಕ್ಷ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಎಲ್ಲಾ ಕ್ಷೇತ್ರಗಳಲ್ಲಿ ದಯನೀಯವಾಗಿ ವಿಫಲವಾಗಿದೆ.
ಎರಡು ವರ್ಷಗಳಲ್ಲಿ, ಹಣದುಬ್ಬರವು ದಾಖಲೆಯ 12 ಶೇಕಡಾಕ್ಕೆ ಏರಿದೆ. ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ.
ಇಮ್ರಾನ್ ವೈಫಲ್ಯವೇ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಮುಖ್ಯವಾಗಿ ಸ್ವಂತ ಪಕ್ಷದಲ್ಲಿ ಹಾಗೂ ಪಾಲುದಾರ ಪಕ್ಷಗಳಲ್ಲಿ ಅಸಮಾಧಾನ ಶುರುವಾಗಿದೆ.
ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರೊಂದಿಗಿನ ಘರ್ಷಣೆಗಳು ಇಮ್ರಾನ್‌ಗೆ ನಕಾರಾತ್ಮಕವಾಗಿ ಪರಿಣಮಿಸಿವೆ.
ಐಎಸ್‌ಐ ಮಹಾನಿರ್ದೇಶಕ ಫೈಜ್ ಹಮೀದ್ ವರ್ಗಾವಣೆಯಾದ ನಂತರ ಇಮ್ರಾನ್ ಸರ್ಕಾರದ ಮೇಲಿನ ಹಿಡಿತ ಕಡಿಮೆಯಾಗಿದೆ.
ಸೇನೆಯೊಂದಿಗೆ ಇಮ್ರಾನ್ ಅವರ ಭಿನ್ನಾಭಿಪ್ರಾಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಇಮ್ರಾನ್ ಅವರನ್ನ ಕೆಳಗಿಳಿಸಲು ಪ್ಲಾನ್ ಮಾಡಿಕೊಂಡಿವೆ.
ಯಾರ ಬಲ ಎಷ್ಟಿದೆ..?
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 342 ಸದಸ್ಯರಿದ್ದು, ಪಿಟಿಐ 155 ಸದಸ್ಯರನ್ನು ಹೊಂದಿದೆ. ಇತರ ಆರು ಪಕ್ಷಗಳ 23 ಜನರ ಬೆಂಬಲದೊಂದಿಗೆ ಇಮ್ರಾನ್ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.
ಅವಿಶ್ವಾಸ ನಿರ್ಣಯದಲ್ಲಿ ಗೆಲ್ಲಬೇಕಾದ್ರೆ 172 ಮಂದಿಗೆ ಬೆಂಬಲ ಬೇಕಾಗಿದೆ. ಆದರೆ ಅವರದೇ 24 ಸಂಸದರು ಇಮ್ರಾನ್ ವಿರುದ್ಧ ಬಂಡಾಯವೆದಿದ್ದಾರೆ. ಇದು ಇಮ್ರಾನ್ ಗೆ ನುಂಗಲಾರದ ತುತ್ತಾಗಿದೆ.
ಈ ಹಿನ್ನೆಲೆಯಲ್ಲಿ ಮೈತ್ರಿಕೂಟದ 23 ಮಂದಿ ಪೈಕಿ ಯಾವುದಾದರೂ ಕೈ ಕೊಟ್ಟರೇ ಇಮ್ರಾನ್ ಪೆವಿಲಿಯನ್ ಸೇರೋದು ಪಕ್ಕಾ ಆಗಿದೆ.
ಅಸೆಂಬ್ಲಿ ವಿಸರ್ಜನೆ?
ಅವಿಶ್ವಾಸ ನಿರ್ಣಯದಲ್ಲಿ ಇಮ್ರಾಣ್ ಖಾನ್ ಗೆ ಸೋಲು ಖಚಿತ ಎಂದು ವರದಿಗಳು ಬರುತ್ತಿವೆ. ಹೀಗಾಗಿ ಹೇಗಿದ್ದರೂ ಇನ್ನೊಂದು ವರ್ಷದಲ್ಲಿ ಅಧಿಕಾರದ ಅವಧಿ ಮುಗಿಯಲಿದೆ.
ಹೀಗಾಗಿ ಅಸಂಬ್ಲಿಯನ್ನ ವಿಸರ್ಜಿಸಿ ಅವಧಿಗೂ ಮುನ್ನ ಚುನಾವಣೆ ಹೋಗಲು ಇಮ್ರಾನ್ ಪ್ಲಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ಭಾಗವಾಗಿಯೇ ಇಸ್ಲಾಮಾಬಾದ್‌ನಲ್ಲಿ ಭಾನುವಾರ ಇಮ್ರಾನ್ ರ್ಯಾಲಿ ನಡೆಸಿದ್ದು, ಶಕ್ತಿ ಪ್ರದರ್ಶಿಸಿದ್ದಾರೆ ಎಂದು ಅಂದಾಜಿಲಾಗುತ್ತಿದೆ.