ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಯಾರಿಂದಲೂ ಆಗುವುದಿಲ್ಲ ಎಂದು ಸಚಿವ ಕೆಎಚ್. ಮುನಿಯಪ್ಪ (K.H.Muniyappa) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 136 ಶಾಸಕರ ಬೆಂಬಲ ಇರುವ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಇಳಿಸಬೇಕು ಎಂಬ ಪ್ರಯತ್ನ ಅಸಾಧ್ಯವಾದದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ದೇಶದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾಡಲಿ. ಕೇಂದ್ರದಲ್ಲಿ ಇವರನ್ನ ಸಚಿವರನ್ನಾಗಿ ಮಾಡಿದ್ದಾರೆ. ನಮ್ಮ ಕಡೆಯಿಂದ ನಾಲ್ಕು ಜನ ಸಚಿವರಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆ ಇವರು ಚಿಂತನೆ ಮಾಡಬೇಕು. ಅದು ಬಿಟ್ಟು ಜನ ವಿರೋಧಿ ಕೆಲಸ ಮಾಡಬಾರದು ಎಂದು ಗುಡುಗಿದ್ದಾರೆ.
ಪ್ರತಿಯೊಬ್ಬರು ಜನಾದೇಶಕ್ಕೆ ಗೌರವ ಕೊಡಬೇಕು. 136 ಸೀಟ್ ಗೆದ್ದು ಜನಾದೇಶ ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ತೆಗಿಬೇಕು ಅಂತಾ ಚಿಂತನೆ ಮಾಡಿದ್ದಾರೆ. ಇದರ ವಿರುದ್ದವಾಗಿ ನಾಳೆ ಜನಾಂದೋಲನ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಯಾವಾಗಲೂ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಮುಡಾ ಕೇಸ್ ಯಾವುದೇ ಸಂಬಂಧವಿಲ್ಲ. ಸಿಎಂ ಅವರು ಫೋನ್ ಮಾಡಿಲ್ಲ, ಪತ್ರ ಬರೆದಿಲ್ಲ. ಸೈಟ್ ಕೊಡಿ ಎಂದು ಕೇಳಿಲ್ಲ. ಇದಕ್ಕೆ ನಾವು ಕಮಿಟಿ ಮಾಡಿದ್ದೇವೆ. ಕಮಿಟಿ ತೀರ್ಮಾನ ಕೊಡಲಿ. ಅದಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಮಾಡಿರುವ ಕಾರ್ಯಕ್ಕೆ ಕುಮಾರಸ್ವಾಮಿ ಕೈ ಜೋಡಿಸಬಾರದಿತ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ಈಗಲೂ ದೊಡ್ಡ ಅವಕಾಶ ಸಿಕ್ಕಿದೆ. ಜನರಿಂದಲೇ ಮುಂದೆ ಬಂದು ಈಗ ಜನರ ಆದೇಶಕ್ಕೆ ವಿರುದ್ಧ ನಡೆದುಕೊಳ್ಳುತ್ತಿರುವುದು ತಪ್ಪು ಎಂದು ಗುಡುಗಿದ್ದಾರೆ.