ನವದೆಹಲಿ: ದೇಶದ ಅಭಿವೃದ್ಧಿಯಲ್ಲಿ ನಾವು ದೊಡ್ಡ ದೊಡ್ಡ ಯೋಜನೆ ಮಾಡಿದ್ದೇವೆಂದರೆ, ಸಂವಿಧಾನ ಬದಲಿಸುತ್ತೇವೆ ಎಂದು ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂಬ ವಿಪಕ್ಷಗಳ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಯಾರೂ ಹೆದರುವ ಅಗತ್ಯವಿಲ್ಲ. ಯಾರನ್ನೂ ಭಯಪಡಿಸುವುದಕ್ಕಾಗಿ ಅಥವಾ ಹಿಮ್ಮೆಟ್ಟಿಸಲು ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ದೇಶ ಹಾಗೂ ಪ್ರತಿಯೊಬ್ಬರ ಅಭಿವೃದ್ಧಿಗಾಗಿ ನಾನು ಹೆಜ್ಜೆ ಇಡುತ್ತಿದ್ದೇನೆ. ನಾನು ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳುವುದಿಲ್ಲ. ಸರಿಯಾದ ರೀತಿಯಲ್ಲಿ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತೇನೆ. ನನ್ನ ದೇಶಕ್ಕೆ ಅದೆಷ್ಟೋ ಅಗತ್ಯತೆಗಳಿರುವುದರಿಂದ ನಾನು ಮಾಡಬೇಕಿರುವುದು ಬಹಳಷ್ಟಿದೆ. ಇದು ಟ್ರೈಲರ್ ಮಾತ್ರ. ಇನ್ನೂ ದೇಶದ ಅಭಿವೃದ್ಧಿ ತುಂಬಾ ಇದೆ ಎಂದು ಹೇಳಿದ್ದಾರೆ. ಅಲ್ಲದೇ, ತಮ್ಮ ಮಹತ್ವಾಕಾಂಕ್ಷಿ 2047ರ ವಿಕಸಿತ ಭಾರತ ಗುರಿ ಕುರಿತು ಅವರು ಮಾತನಾಡಿದ್ದಾರೆ.