ಸಾವಿನ ವಿಷಯದಲ್ಲಿ ರಾಜಕೀಯ ಮಾಡಬೇಡಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಾಕೀತು
ವೈದ್ಯರ ಸಮಸ್ಯೆಗಳ ಕುರಿತು ಸಿಎಂ ಜೊತೆ ಚರ್ಚಿಸಿದ್ದೇನೆ – ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಾಕೀತು
ಬೆಂಗಳೂರು, ಆಗಸ್ಟ್ 21, ಶುಕ್ರವಾರ – ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ವೈದ್ಯರ ಸಮಸ್ಯೆಗಳೇನು ಎಂಬುದು ಸರ್ಕಾರಕ್ಕೆ ಗೊತ್ತಿದೆ. ವೈದ್ಯರ ಸಮಸ್ಯೆಗಳ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗಿದೆ. ಆದರೆ ಸಾವಿನ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಾಕೀತು ಮಾಡಿದ್ದಾರೆ.
“ದೈವಾಧೀನರಾದ ಡಾ.ನಾಗೇಂದ್ರ ಅವರ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಡಾ.ನಾಗೇಂದ್ರ ಅವರ ಸಾವಿನ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡಲು ಮೈಸೂರಿನ ಪ್ರಾದೇಶಿಕ ಆಯುಕ್ತರನ್ನು ನಿಯೋಜಿಸಲಾಗಿದೆ. ಆದರೆ ಶಿವಕುಮಾರ್ ಅವರು ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಮೂಲಕ ವಿಕೃತಿ ತೋರಿಸಿದ್ದಾರೆ” ಎಂದು ಸಚಿವರು ಹೇಳಿದ್ದಾರೆ.
“ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಾ.ನಾಗೇಂದ್ರ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ ಹಾಗೂ ಮೃತರ ಪತ್ನಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗ ನೀಡಲು ಕ್ರಮ ಕೈಗೊಂಡಿದ್ದಾರೆ. ಆದರೆ ಈ ಘಟನೆಯನ್ನು ಕೆಲವರು ಬೇರೆ ಕಾರಣಗಳಿಗೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಸಚಿವರು ಹೇಳಿದ್ದಾರೆ.
ಬಿಜೆಪಿ ವರಿಷ್ಠರ ಭೇಟಿ
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಚಿವ ಡಾ.ಕೆ.ಸುಧಾಕರ್ ಭೇಟಿಯಾಗಿ ಮಾತುಕತೆ ನಡೆಸಿದರು.
“ಕೋವಿಡ್ ನಿಯಂತ್ರಣಕ್ಕೆ ತರಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಬಿ.ಎಲ್.ಸಂತೋಷ್ ಅವರಿಗೆ ಮಾಹಿತಿ ನೀಡಿದ್ದೇನೆ. ದಿನಕ್ಕೆ 1 ಲಕ್ಷದಷ್ಟು ಕೊರೊನಾ ಪರೀಕ್ಷೆ ಮಾಡಿಸಲು ಕ್ರಮ ಕೈಗೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಟ್ಯಾಪ್ ಮಾಡುವ ದಾರಿದ್ರ್ಯ ನಮಗಿಲ್ಲ
ಫೋನ್ ಟ್ಯಾಪ್ ಕುರಿತು ಪ್ರತಿಕ್ರಿಯಿಸಿರುವ ಸಚಿವ ಡಾ.ಕೆ.ಸುಧಾಕರ್ “ಡಿ.ಕೆ.ಶಿವಕುಮಾರ್ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ಏಳು ಸ್ವಾಮೀಜಿಗಳ ಫೋನ್ ಟ್ಯಾಪ್ ಆಗಿತ್ತು. ಆ ಪ್ರಕರಣ ಇನ್ನೂ ಜೀವಂತವಾಗಿದೆ. ಫೋನ್ ಕದ್ದಾಲಿಕೆ ಮಾಡುವ ದಾರಿದ್ರ್ಯ ನಮಗಿಲ್ಲ” ಎಂದು ಹೇಳಿದ್ದಾರೆ.