ಚಾಮರಾಜನಗರ: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಗೂಂಡಾ ಎಂಬ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕೆ ನೋಟಿಸ್ ನೀಡಲಾಗಿದೆ.
ಆ ಪದ ಬಳಕೆಯ ಬಗ್ಗೆ ವಿವರ ನೀಡುವಂತೆ ಚಾಮರಾಜನಗರ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ನೀಡಿದ್ದಾರೆ. ಸಹಾಯಕ ಚುನಾವಣಾಧಿಕಾರಿ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಂದ ವರದಿ ಪಡೆದು ಈ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.
ನೋಟಿಸ್ ನೀಡಿರುವ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಖಚಿತಪಡಿಸಿದ್ದಾರೆ. ಮಾ. 29 ರಂದು ಹನೂರು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಅಮಿತ್ ಶಾ ಓರ್ವ ಗೂಂಡಾ, ರೌಡಿ. ಗುಜರಾತ್ನಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಇಂತವರನ್ನು ಮೋದಿ ಪಕ್ಕದಲ್ಲಿ ಕೂಡಿಸಿಕೊಂಡಿದ್ದಾರೆ ಎಂದು ಯತೀಂದ್ರ ಆರೋಪಿಸಿದ್ದರು.