ಮನೆ ಜಪ್ತಿಗೆ ಬಂದ ಅಧಿಕಾರಿಗಳು – ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಮನೆ ಮಾಲಿಕರ ಪತ್ನಿ
ಪುತ್ತೂರು, ಫೆಬ್ರವರಿ19:ಸಾಲ ಮರುಪಾವತಿ ಮಾಡಿಲ್ಲ ಎಂದು ಮನೆ ಮುಟ್ಟುಗೋಲು ಹಾಕಲು ಬ್ಯಾಂಕ್ ಸೀಝರ್ ಗಳು ಬಂದಾಗ ಮರ್ಯಾದೆಗೆ ಅಂಜಿ ಮನೆ ಮಾಲಿಕರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಪುತ್ತೂರಿನ ಹಾರಾಡಿ ರೈಲ್ವೆ ರಸ್ತೆಯ ಬಳಿ ಫೆಬ್ರವರಿ18ರಂದು ನಡೆದಿದೆ.
ಪುತ್ತೂರಿನ ಉದ್ಯಮಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು ಮನೆ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ನನ್ನ ಸಾವಿಗೆ ಬ್ಯಾಂಕ್ ನವರ ಉಪದ್ರವ ಕಾರಣ. ಅವರ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರಾರ್ಥನಾ ಪ್ರಭು ಡೆತ್ ನೋಟ್ ಬರೆದಿಟ್ಟು ಮನೆಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಘುವೀರ್ ಪ್ರಭು ಅವರು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಸಾಲವನ್ನು ಹೊಂದಿದ್ದು, ಮರು ಪಾವತಿ ಮಾಡಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನೋಟಿಸ್ ಬಂದಿತ್ತು. ಫೆಬ್ರವರಿ 18 ರಂದು ಮನೆ ಮುಟ್ಟುಗೋಲು ಹಾಕಲು ಕೋರ್ಟ್ ಆದೇಶದೊಂದಿಗೆ ಬ್ಯಾಂಕ್ ಸೀಝರ್ ಬಂದಾಗ ಮನೆಮಂದಿ ಆತಂಕಿತರಾಗಿದ್ದರು. ರಘುವೀರ್ ಪ್ರಭು ಅವರ ಮಕ್ಕಳು ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಮನೆಯನ್ನು ಮುಟ್ಟುಗೋಲು ಹಾಕದಂತೆ ಬ್ಯಾಂಕ್ ಮತ್ತು ಕೋರ್ಟ್ ಕಮಿಷನ್ ಅಧಿಕಾರಿಗಳನ್ನು ವಿನಂತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ನಿರಾಕರಿಸಿದ ಅಧಿಕಾರಿಗಳು ಮನೆಯ ಹಿಂಬದಿ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ನಡುವೆ ಆತಂಕಿತರಾದ ಪ್ರಾರ್ಥನಾ ಪ್ರಭು ಮನೆಯ ಕೊಠಡಿಯೊಂದರಲ್ಲಿ ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ಅವರನ್ನು ಮುಟ್ಟುಗೋಲಿಗೆ ಭದ್ರತೆ ಒದಗಿಸಲು ಬಂದ ಪೋಲಿಸರು ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಬ್ಯಾಂಕ್ ನವರು ಮನೆ ಹಿಂಬದಿಯ ಬಾಗಿಲಿಗೆ ಸೀಲ್ ಹಾಕಿ ಮನೆಯ ಗೇಟ್ ಬಳಿ ಮುಟ್ಟುಗೋಲು ಮಾಡಲಾಗಿದೆ ಎಂದು ಬ್ಯಾನರ್ ಹಿಡಿದು ಪೋಟೋ ಕ್ಲಿಕಿಸಿದ್ದು, ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಜೀವ ಹೋದ ಮೇಲೂ ಮನೆ ಸೀಝ್ ಮಾಡುವುದು ಸರಿಯಲ್ಲ, ಮಾನವೀಯತೆ ಇರಲಿ ಎಂದಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಮನೆ ಮಾಲೀಕ ರಘುವೀರ್ ಪ್ರಭು ಸಾಲದ ವಿಚಾರಣೆ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಸಾಲಗಾರರಲ್ಲದ ತನ್ನ ಮಕ್ಕಳ ಹೆಸರಿನಲ್ಲಿರುವ ಮನೆಯನ್ನು ಮುಟ್ಟುಗೋಲು ಮಾಡಲು ಬಂದಿರುವುದು ಕಾನೂನು ಬಾಹಿರವಾಗಿದೆ ಎಂದಾಗ ಬ್ಯಾಂಕ್ ಅಧಿಕಾರಿಗಳು ಸೀಲ್ ಮಾಡಿದ ಮನೆಯ ಕೀಯನ್ನು ರಘುವೀರ್ ಪ್ರಭು ಅವರ ಮಕ್ಕಳಿಗೆ ಹಸ್ತಾಂತರಿಸಿ ತೆರಳಿದ್ದಾರೆ ಎಂದು ಹೇಳಲಾಗಿದೆ.