ಆಕರ್ಷಕ ಫೀಚರ್, 10 ಬಣ್ಣಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡ್ತಿದೆ Ola Electric scooters..!
ಬೆಂಗಳೂರು : ಬಹು ನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳು, ದ್ವಿಚಕ್ರ ವಾಹನ ಸರಣಿಯಲ್ಲೇ ವಿಸ್ತೃತ ಶ್ರೇಣಿ ಎನಿಸಿದ 10 ವಿಶಿಷ್ಟ ಹಾಗೂ ಆಕರ್ಷಕ ಬಣ್ಣಗಳಲ್ಲಿ ಲಭ್ಯ ಎಂದು ಓಲಾ ಇಲೆಕ್ಟ್ರಿಕ್ ಬಹಿರಂಗಪಡಿಸಿದೆ. ಆನ್ಲೈನ್ ಟ್ಯಾಕ್ಸಿ ಸೇವೆಯ ಮೂಲಕ ಈಗಾಗಲೇ ಮನೆಮಾತಾಗಿರುವ ಓಲಾ ಇದೇ ಮೊದಲ ಬಾರಿ ತನ್ನದೇ ಬ್ರ್ಯಾಂಡ್ನ ಎಲೆಕ್ಟ್ರಿಕ್ ಸ್ಕೂಟರ್ನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಹೊಸ ಸ್ಕೂಟರ್ನ ಬುಕ್ಕಿಂಗ್ ಆರಂಭಗೊಂಡಿದ್ದು, 499 ರೂ. ಮುಂಗಡ ಹಣ ಪಾವತಿಸಿ ಕಾಯ್ದಿರಿಸಿಕೊಳ್ಳಬಹುದು. ಸದ್ಯ ಆನ್ಲೈನ್ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಮಾರಾಟ ಮಳಿಗೆಗಳನ್ನು ತೆರೆಯಲ್ಲಿದ್ದೇವೆ ಎಂದು ಓಲಾ ಕಂಪೆನಿ ತಿಳಿಸಿದೆ.
ಬಿಡುಗಡೆ ಸನ್ನಿಹಿತವಾಗುತ್ತಿರುವಂತೆ ನಿಖರವಾಗಿ ಬಣ್ಣಗಳ ಹೆಸರುಗಳನ್ನು ಪ್ರಕಟಿಸಲಾಗುವುದಾದರೂ, ನೀಲಿ ಮತ್ತು ಕಪ್ಪು, ಆಕರ್ಷಕ ಬಣ್ಣಗಳಾದ ಕೆಂಪು, ಪಿಂಕ್ ಮತ್ತು ಹಳದಿ ಹಾಗೂ ಬಿಳಿ ಮತ್ತು ಸಿಲ್ವರ್ ಬಣ್ಣಗಳು ಮೆಟ್ಟೆ ಮತ್ತು ಗ್ಲೋಸ್ ಶೇಡ್ಗಳಲ್ಲಿ ಲಭ್ಯ ಎನ್ನುವುದನ್ನು ಪ್ರಕಟಿಸಿದೆ. ಸಮಗ್ರ ಬಣ್ಣಗಳ ಶ್ರೇಣಿಯನ್ನು ಮೊದಲ ಬಾರಿಗೆ ಇಂದು ಫಿಲ್ಮ್ ಒಂದನ್ನು ಟ್ವೀಟ್ ಮಾಡುವ ಮೂಲಕ ಓಲಾದ ಅಧ್ಯಕ್ಷ ಮತ್ತು ಸಿಇಓ ಭವಿಷ್ ಅಗರ್ವಾಲ್ ಪ್ರಕಟಿಸಿದ್ದಾರೆ. “ಇದು ಹತ್ತು ಬಣ್ಣಗಳ ಕ್ರಾಂತಿ” ಎಂದು ಅವರು ಬಣ್ಣಿಸಿದ್ದಾರೆ. ಅಲ್ಲದೇ ಬುಕ್ಕಿಂಗ್ ಮಾಡಲಾದ ಸ್ಕೂಟರ್ ನ್ನು ಕೊರೋನಾ ಕಾರಣದಿಂದಾಗಿ ಮನೆ ಬಾಗಿಲಿಗೆ ತಲುಪಿಸುವುದಾಗಿ ಘೋಷಿಸಿದೆ. ಹಾಗೆಯೇ ಆಯ್ದ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸೆಂಟರ್ಗಳನ್ನು ನಿರ್ಮಿಸಲಿದ್ದು, ಈಗಾಗಲೇ ನಿರ್ಮಾಣ ಪ್ರಕ್ರಿಯೆಗಳ ಸಿದ್ಧತೆಗಳು ಶುರುವಾಗಿದೆ. ಇದರಿಂದ ಓಲಾ ಸ್ಕೂಟರ್ ನ್ನು ಚಾರ್ಜಿಂಗ್ ಸ್ಟೇಷನ್ ಮೂಲಕ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು.
ಹೈಪರ್ ಚಾರ್ಜಿಂಗ್ ಕೇಂದ್ರದಲ್ಲಿ,ಕೇವಲ 18 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು. ಇನ್ನು ಮನೆಯಲ್ಲಿಯೇ ಸಂಪೂರ್ಣವಾಗಿ ಚಾರ್ಜ್ ಮಾಡಲು ಐದಾರು ಗಂಟೆ ತೆಗೆದುಕೊಳ್ಳಲಿದೆ. ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳ ಮೂರು ಮಾಡೆಲ್ ಗಳಲ್ಲಿ ಬಿಡುಗಡೆ ಮಾಡಲಿದೆ. ಈ ಮೂರು ಮಾಡೆಲ್ಗಳಿಗೆ ಓಲಾ ಎಸ್, ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಂದು ಹೆಸರಿಡಲಾಗಿದೆ. ಇವುಗಳು ಕ್ರಮವಾಗಿ 2kW, 4kW ಮತ್ತು 7kW ಮೋಟರ್ಗಳನ್ನು ಹೊಂದಿರಲಿವೆ. ಬೇಸ್ ಮಾಡೆಲ್ 45 ಕಿಲೋಮೀಟರ್ ವೇಗ ಹೊಂದಿದ್ದರೆ, ಎರಡನೆಯದು 70 ಕಿಲೋಮೀಟರ್ ವೇಗವನ್ನು ಹೊಂದಿರಲಿದೆ. ಹಾಗೆಯೇ 7kW ಮಾಡೆಲ್ನ್ನು 95 ಕಿ.ಮೀ ವೇಗದಲ್ಲಿ ಓಡಿಸಬಹುದು.
ಕಳೆದ ಗುರುವಾರ ಸಂಜೆ ಕಂಪನಿ ಈ ವಿನೂತನ ಸ್ಕೂಟರ್ನ ಕಾಯ್ದಿರಿಸುವಿಕೆಯನ್ನು ಮುಕ್ತಗೊಳಿಸಿದ ಮೊದಲ 24 ಗಂಟೆಗಳಲ್ಲೇ ಒಂದು ಲಕ್ಷಕ್ಕೂ ಅಧಿಕ ಓಲಾ ಸ್ಕೂಟರ್ ಗಳು ಕಾಯ್ದಿರಿಸಲ್ಪಟ್ಟಿದ್ದು, ಹೊಸ ದಾಖಲೆ ಸೃಷ್ಟಿಸಿದೆ. ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸರಣಿಯಲ್ಲಿ ಮೊದಲನೆಯದಾದ ಓಲಾ ಸ್ಕೂಟರನ್ನು ಭಾರತದ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರವಾಹನ ಫ್ಯಾಕ್ಟರಿ ಎನಿಸಿದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ. ಓಲಾ ಸ್ಕೂಟರ್ ಫ್ಯಾಕ್ಟರಿಯ ಮೊದಲ ಹಂತ ವಾರ್ಷಿಕವಾಗಿ 20 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಮುಂದಿನ ವರ್ಷದ ವೇಳೆಗೆ ಇದು ಪೂರ್ಣಪ್ರಮಾಣದಲ್ಲಿ ಸಜ್ಜಾದಾಗ ವಾರ್ಷಿಕ ಒಂದು ಕೋಟಿ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.








