ವಿಶ್ವಾದ್ಯಂತ ಕೋವಿಡ್ ನ ರೂಪಾಂತರಿ ಓಮಿಕ್ರಾನ್ (omicron ) ಆತಂಕ ಹೆಚ್ಚಾಗಿದೆ.. ಭಾರತದಲ್ಲೂ ದಿನೇ ದಿನೇ ಓಮಿಕ್ರಾನ್ ಭೀತಿ ಏರುತ್ತಲೇ ಇದೆ.. ಈ ನಡುವೆ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ
( WHO) ಮತ್ತೊಂದು ಆಘಾತಕಾರಿ ಮಾಹಿತಿ ನೀಡಿದೆ.. ಈ ವೈರಸ್ ಹಿಂದಿನ ಎಲ್ಲಾ ತಳಿಗಳಿಗಿಂತಲೂ ಅತಿ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಮಂಗಳವಾರ ಜಿನೀವಾದಲ್ಲಿ ನಡೆದ ಬ್ರೀಫಿಂಗ್ನಲ್ಲಿ, ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಈ ಬಗ್ಗೆ ಮಾತನಾಡಿರೋದಾಗಿ ವರದಿಯಾಗಿದೆ. “ಎಪ್ಪತ್ತೇಳು ದೇಶಗಳಲ್ಲಿ ಈಗ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.. ವಾಸ್ತವವಾಗಿ ಓಮಿಕ್ರಾನ್ ಬಹುಶಃ ಹೆಚ್ಚಿನ ದೇಶಗಳಲ್ಲಿ ಇರಬಹುದು, ಆದ್ರೆ ಪತ್ತೆಯಾಗದೇ ಇರಬಹುದು.
ಒಮಿಕ್ರಾನ್ ಅನ್ನು “ಸೌಮ್ಯ” ರೂಪಾಂತರವೆಂದು ದೇಶಗಳು ಪರಿಗಣಿಸುತ್ತಿವೆ ಎಂದು WHO ಚಿಂತಿಸುತ್ತಿದೆ ಎಂದು ಘೆಬ್ರೆಯೆಸಸ್ ಹೇಳಿದರು. ಒಮಿಕ್ರಾನ್ ಕಡಿಮೆ ತೀವ್ರವಾದ ಕಾಯಿಲೆಗೆ ಕಾರಣವಾಗಿದ್ದರೂ ಸಹ, ವೇಗವಾಗಿ ಹರಡುತ್ತಿದ್ದು, ಮುಂದೆ ಇದು ಆತಂಕಕಾರಿಯಾಗಿ ಪರಿಣಮಿಸಬಹುದು ಎಂದಿರುವುದಾಗಿ ವರದಿಯಾಗಿದೆ..
ಇನ್ನೂ ಸೋಂಕನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಂಸ್ಥೆಯ ಸಲಹೆಯನ್ನು WHO ಮುಖ್ಯಸ್ಥರು ಪುನರುಚ್ಚರಿಸಿದರು. ಆರೋಗ್ಯ ವ್ಯವಸ್ಥೆಗಳು ವಾಸ್ತವದಲ್ಲಿ ಒಂದು ವರ್ಷದ ಹಿಂದೆ ಇದ್ದಕ್ಕಿಂತ ಈಗ ದುರ್ಬಲವಾಗಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ…