ಬೆಂಗಳೂರು : ತೀವ್ರ ವಿರೋಧದ ನಡುವೆ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನು ನಾಮಕರಣ ಮಾಡಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ. ಯಲಹಂಕದ ಡೈರಿ ಸರ್ಕಲ್ ಬಳಿ ಇರುವ ಮೇಲ್ಸೇತುವೆ ಇದಾಗಿದೆ. 388.35 ಮೀಟರ್ ಉದ್ದದ ಈ ಮೇಲ್ಸೇತುವೆಯನ್ನು ಬಿಬಿಎಂಪಿಯಿಂದ 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಬಿಬಿಎಂಪಿಯಿಂದ ನಿರ್ಮಾಣಗೊಂಡಿರುವ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ನೂತನ ಮೇಲ್ಸೇತುವೆ ಉದ್ಘಾಟನೆ ಹಾಗೂ ವೀರ ಸಾವರ್ಕರ್ ಹೆಸರು ನಾಮಕರಣ ಮಾಡಲು ಬಿಬಿಎಂಪಿಯಿಂದ ಕಳೆದ ಮೇ. 28 ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ವೀರ ಸಾವರ್ಕರ್ ಹೆಸರಿಡಲು ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮವನ್ನು ರದ್ದು ಮಾಡಿತ್ತು.
ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಮೇಲ್ಸೇತುವೆಯನ್ನು ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಸ್.ಆರ್ ವಿಶ್ವನಾಥ್, ಸಚಿವರಾದ ಸಿಟಿ ರವಿ, ಡಿಸಿಎಂ ಅಶ್ವಥ್ ನಾರಾಣ್, ಗೃಹ ಸಚಿವ ಬಸವರಾಜ್ ಬೊಮ್ಮಯಿ ಮತ್ತು ಬೈರತಿ ಬಸವರಾಜು ಉಪಸ್ಥಿತರಿದ್ದರು.