ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಾಟದ ನಡುವೆ ಆಪರೇಷನ್ ಕಮಲ ಕೂಡ ಚುರುಕುಕೊಂಡಿದ್ದು, ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಟಿ.ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಿಬಿಎಂಪಿ ಸದಸ್ಯೆಯ ಪತಿ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದ ತಿಮ್ಮನಂಜಯ್ಯ ಅವರು ಇಂದು ಕಮಲ ಹಿಡಿದಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.
ಸದ್ಯ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ಕಾಂಗ್ರೆಸ್ ಪಕ್ಷದ ಸದಸ್ಯೆ ಲಲಿತಾ ಅಧಿಕಾರದಲ್ಲಿದ್ದು, ಪತಿ ತಿಮ್ಮನಂಜಯ್ಯ ಬಿಜೆಪಿ ಸೇರ್ಪಡೆಗೊಂಡಿರುವುದು ಟಿ.ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಭಾರಿ ಶಾಕ್ ನೀಡಿದೆ. ಮಾಜಿ ಶಾಸಕ ಎಸ್. ಮುನಿರಾಜು ಸಮ್ಮುಖದಲ್ಲಿ ತಿಮ್ಮನಂಜಯ್ಯ ಅವರು ಕೇಸರಿ ಪಡೆ ಸೇರಿದ್ದಾರೆ.
ಟಿ.ದಾಸರಹಳ್ಳಿಯ ಬಾಗಲಗುಂಟೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ತಿಮ್ಮನಂಜಯ್ಯ ಮತ್ತು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿದ್ದು, ಈ ವೇಳೆ ಮಾಜಿ ಶಾಸಕ ಎಸ್.ಮುನಿರಾಜು, ಕ್ಷೇತ್ರದ ಅಧ್ಯಕ್ಷ ಲೋಕೇಶ್, ತಿಮ್ಮನಂಜಯ್ಯ, ಮುಖಂಡರಾದ ನರಸಿಂಹ ಮೂರ್ತಿ, ಸಿಎಂ. ನಾಗರಾಜು, ಉಮಾದೇವಿ, ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.








