2007ರ ಟಿ-20 ವಿಶ್ವಕಪ್ – ಆಪರೇಷನ್ ಸೂಪರ್ ಓವರ್ ಬೌಲ್ ಔಟ್ ಗೆಲುವಿನ ಸಿಕ್ರೇಟ್ ಏನು ಗೊತ್ತಾ…?
saakshatv.com
ಇದು ಸುಮಾರು 18 ವರ್ಷಗಳ ಹಿಂದೆ ನಡೆದಿರುವ ಘಟನೆ… ಕೆಲವು ವರ್ಷಗಳ ಹಿಂದೆ ರಿವೀಲ್ ಆಗಿರುವ ವಿಷ್ಯವೇ.. ಹಳೆಯ ಸುದ್ದಿ ಬರೆಯೋಕೆ ಆಗಿರಲಿಲ್ಲ.. ನೆನಪಿಗೆ ಇರಲಿ ಅಂತ ಹಾಗೇ ಸುಮ್ಮನೆ ಒಂದು ಸ್ಟೋರಿ..!❤
ಅದು ಚೊಚ್ಚಲ ಟಿ-20 ವಿಶ್ವಕಪ್ ಟೂರ್ನಿ. ಸೆಪ್ಟಂಬರ್ 14, 2007. ಡರ್ಬಾನ್‍ನಲ್ಲಿ ನಡೆದಿದ್ದ ಹತ್ತನೇ ಮ್ಯಾಚ್. ಡಿ ಗುಂಪಿನ ಅತೀ ರಣ ರೋಚಕ ಪಂದ್ಯ. ಕಾರಣ ಅದು ಬದ್ಧ ವೈರಿಗಳಾದ ಭಾರತ – ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿ.
ಎಲ್ಲವೂ ಗೊತ್ತಿರುವಂತೆ ನಿಗದಿತ 20 ಓವರ್‍ಗಳ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಭಾರತ 9 ವಿಕೆಟ್‍ಗೆ 141 ರನ್ ಗಳಿಸಿತ್ತು. ಪಾಕ್ ಏಳು ವಿಕೆಟ್ ನಷ್ಟಕ್ಕೆ 141 ರನ್ ದಾಖಲಿಸಿತ್ತು.
ಸೂಪರ್ ಓವರ್ ಕ್ಲೈಮ್ಯಾಕ್ಸ್‍ನಲ್ಲಿ ಭಾರತ ಗೆಲುವು ಸಾಧಿಸಿತ್ತು. 20ನೇ ಓವರ್‍ನ ಕೊನೆಯ ಎಸೆತದಲ್ಲಿ ಮಿಸ್ಬಾ ಉಲ್ ಹಕ್ ರನೌಟ್ ಆಗುವ ಮೂಲಕ ಗೆಲ್ಲುವ ಪಂದ್ಯವನ್ನು ಪಾಕ್ ಕೈಚೆಲ್ಲಿಕೊಂಡಿತ್ತು.
saakshatv.com
ಆದ್ರೆ ಸೂಪರ್ ಓವರ್‍ನ ಬೌಲ್ ಔಟ್‍ನಲ್ಲಿ ಧೋನಿಯ ಮಾಸ್ಟರ್ ಮೈಂಡ್‍ಗೆ ಪಾಕ್ ನಿರುತ್ತರವಾಗಿತ್ತು. ಧೋನಿಯ ರಣತಂತ್ರವನ್ನು ಅರಿತುಕೊಳ್ಳುವಲ್ಲಿ ವಿಫಲವಾಯ್ತು. ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡಾಗ ಮಾತ್ರ ಯಶ ಸಾಧಿಸಲು ಸಾಧ್ಯ ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿತ್ತು. ಇಲ್ಲಿ ಸಾಂಪ್ರದಾಯಿಕ ಕ್ರಿಕೆಟ್ ತಂತ್ರಗಳ ಬದಲು ವರ್ಕ್ ಔಟ್ ಆಗಿದ್ದು ಧೋನಿಯ ಮೈಂಡ್ ಗೇಮ್..
ಅಂದ ಹಾಗೇ ಈ ಪಂದ್ಯದಲ್ಲಿ ಎಲ್ಲವೂ ಮೊದ ಮೊದಲು.. ಐಸಿಸಿ ಟಿ-20 ಕ್ರಿಕೆಟ್ ಮೊದಲ ಟೂರ್ನಿ. ಟಿ-20 ಪಂದ್ಯವೊಂದು ಟೈ ಆಗಿದ್ದು ಕೂಡ ಮೊದಲು.. ಸೂಪರ್ ಓವರ್ ಕೂಡ ಮೊದಲು.. ಸೂಪರ್ ಓವರ್‍ನಲ್ಲಿ ಬೌಲ್ ಔಟ್ ಕೂಡ ಮೊದಲು.. ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಸೂಪರ್ ಓವರ್‍ನಲ್ಲಿ ಭಾರತ ಗೆಲುವು ಸಾಧಿಸಿದ್ದು ಕೂಡ ಮೊದಲು.
saakshatv.com
ಹೌದು, ಪಂದ್ಯ ಸೋಲುತ್ತೇವೆ ಎಂಬ ಭಯ ಟೀಮ್ ಇಂಡಿಯಾ ಆಟಗಾರರಿಗೆ ಬಹುತೇಕ ನಿಶ್ಚಿತವಾಗಿತ್ತು. ಆದ್ರೆ ಕೊನೆಯ ತನಕ ಬಿಟ್ಟುಕೊಡುವ ಪ್ರಶ್ನೆಯೇ ಇರಲಿಲ್ಲ. ಹಾಗಾಗಿಯೇ ಟೀಮ್ ಇಂಡಿಯಾ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಅತ್ತ ಪಾಕಿಸ್ತಾನಕ್ಕೆ ಅತೀಯಾದ ಆತ್ಮವಿಶ್ವಾಸವೇ ಮುಳುವಾಗಿತ್ತು. ಕೊನೆಯ ಓವರ್‍ನಲ್ಲಿ ಪಾಕ್ ಡಗೌಟ್‍ನಲ್ಲಿ ಗೆಲುವಿನ ಸಂಭ್ರಮಕ್ಕೆ ಆಟಗಾರರು ರೆಡಿಯಾಗಿದ್ದರು. ಆದ್ರೆ ಆಗಿದ್ದೇ ಬೇರೆ. ಕೊನೆಯ ಎಸೆತದಲ್ಲಿ ಮಿಸ್ಬಾ ರನೌಟ್ ಆದಾಗ ಪಾಕ್ ಆಟಗಾರರ ಮುಖ ಸಪ್ಪೆ ಸಪ್ಪೆಯಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಹತಾಶೆ ಆಟಗಾರರಲ್ಲಿ ಮನೆ ಮಾಡಿತ್ತು.
saakshatv.com
ಆದ್ರೆ ಸೂಪರ್ ಓವರ್‍ನ ಬೌಲ್ ಔಟ್ ವೇಳೆ ಆಟಗಾರರ ಮುಖದಲ್ಲಿ ಮಂದಹಾಸ… ನಗು ನಗುತ್ತಲೇ ಸೂಪರ್ ಓವರ್‍ನ ಬೌಲ್ ಔಟ್‍ಗೆ ಅಣಿಯಾಗಿದ್ದರು. ಇಲ್ಲಿ ಟೀಮ್ ಇಂಡಿಯಾ ನಾಯಕ ಧೋನಿ ಡಿಫರೆಂಟ್ ಗೇಮ್ ಪ್ಲ್ಯಾನ್ ಮಾಡಿದ್ದರು. ಪ್ರಮುಖ ಬೌಲರ್‍ಗಳ ಕೈಗೆ ಬೌಲಿಂಗ್ ಮಾಡಲು ಚೆಂಡನ್ನು ನೀಡಲಿಲ್ಲ. ಇದೇ ವೇಳೆ ಸೆಹ್ವಾಗ್ ಬಂದು ಮೊದಲು ನಾನು ಬೌಲಿಂಗ್ ಮಾಡುತ್ತೇನೆ. ಬಳಿಕ ರಾಬಿನ್ ಮಾಡಲಿ ಅಂದ್ರಂತೆ. ವೀರು ಸ್ಟಂಪ್ ಎಗರಿಸುವಲ್ಲಿ ಸಫಲರಾದ್ರು. ನಂತರ ರಾಬಿನ್ ಉತ್ತಪ್ಪ, ಹರ್ಭನ್ ಸಿಂಗ್ ವಿಕೆಟ್‍ಗೆ ಗುರಿ ಇಟ್ಟು ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿಗೆ ಕಾರಣರಾದ್ರು.
saakshatv.com
ಆದ್ರೆ ವೀರೂ, ರಾಬಿನ್, ಭಜ್ಜಿ ಅಷ್ಟೊಂದು ಇಝೀಯಾಗಿ ಸ್ಟಂಪ್ ಎಗರಿಸಿದ್ದು ಹೇಗೆ ಎಂಬುದನ್ನು ಪಾಕ್ ಆಟಗಾರರು, ಕೋಚ್, ಮ್ಯಾನೇಜ್‍ಮೆಂಟ್ ಸ್ವಲ್ಪನೂ ಯೋಚನೆ ಮಾಡಲಿಲ್ಲ.
ಇಲ್ಲಿ ಪಾಕ್ ತಂಡದ ನಾಯಕ ಶೋಯಿಬ್ ಮಲ್ಲಿಕ್ ಬೌಲ್ ಔಟ್‍ಗೆ ತಂಡದ ಪ್ರಮುಖ ಬೌಲರ್‍ಗಳ ಕೈಗೆ ಚೆಂಡನ್ನು ನೀಡಿದ್ದರು. ಯಾಸೀರ್ ಆರಾಫತ್, ಉಮರ್ ಗುಲ್ ಹಾಗೂ ಶಾಹೀದ್ ಆಫ್ರಿದಿ ಸ್ಟಂಪ್‍ಗೆ ಗುರಿ ಇಟ್ಟು ಬೌಲಿಂಗ್ ಮಾಡಲಿಲ್ಲ. ಹೀಗಾಗಿ ಫುಟ್‍ಬಾಲ್‍ನ ಪೆನಾಲ್ಟಿ ಶೂಟ್‍ಔಟ್ ಮಾದರಿಯಲ್ಲೇ ಭಾರತ 3-0ರಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
saakshatv.com
ಅಷ್ಟಕ್ಕೂ ಇಲ್ಲಿ ವರ್ಕ್ ಔಟ್ ಆಗಿದ್ದು ಧೋನಿಯ ಸ್ಮಾರ್ಟ್‍ನೆಸ್. ವೀರೂ, ರಾಬಿನ್, ಭಜ್ಜಿ ಬೌಲಿಂಗ್ ಮಾಡುವಾಗ ಧೋನಿ ಮಾಮೂಲಿಯಂತೆ ವಿಕೆಟ್ ಕೀಪಿಂಗ್ ಮಾಡಲಿಲ್ಲ. ಬದಲಾಗಿ ಮೂರು ವಿಕೆಟ್‍ಗಳನ್ನು ಕವರ್ ಮಾಡಿಕೊಂಡು ಹಿಂದೆ ಕುಳಿತುಕೊಂಡು ಕೀಪಿಂಗ್ ಮಾಡಿದ್ದರು. ಇದು ಬೌಲರ್‍ಗಳಿಗೆ ಸುಲಭವಾಗಿ, ನಿಖರವಾಗಿ ಸ್ಟಂಪ್ ಎಗರಿಸಲು ಸಾಧ್ಯವಾಯ್ತು.
saakshatv.com
ಆದ್ರೆ ಪಾಕ್‍ನ ಕೀಪರ್ ಕಮ್ರಾನ್ ಅಕ್ಮಲ್ ಮೂಮೂಲಿ ಶೈಲಿಯಲ್ಲಿ ಕಿಂಪಿಂಗ್ ಮಾಡಿದ್ರು. ಪರಿಣಾಮ ಪಾಕ್ ಬೌಲರ್‍ಗಳಿಗೆ ಸ್ಟಂಪ್ ಅನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅನ್ನೋದು ಧೋನಿ ಸಾಮಾನ್ಯ ಮನುಷ್ಯನಲ್ಲ.. ಆಟದ ಜೊತೆ ಸ್ಮಾರ್ಟ್‍ನೆಸ್ ಕೂಡ ವರ್ಕ್ ಆಗುತ್ತೆ ಅಂತ. ಅಂದ ಹಾಗೇ ರೀತಿಯ ಸ್ಮಾರ್ಟ್ ಕ್ರಿಕೆಟ್ ತಂತ್ರಗಳು ಸಾಕಷ್ಟು ಬಾರಿ ಟೀಮ್ ಇಂಡಿಯಾದ ಗೆಲುವಿಗೆ ಸಹಕಾರಿಯಾಗಿವೆ. ಅಷ್ಟಕ್ಕೂ ಈ ವಿಷ್ಯವನ್ನು ರಿವೀಲ್ ಮಾಡಿರೋದು ಟೀಮ್ ಇಂಡಿಯಾದ ಮಾಜಿ ಬ್ಯಾಟರ್‍ಗಳಾದ ವೀರೇಂದ್ರ ಸೆಹ್ವಾಗ್ ಹಾಗೂ ರಾಬಿನ್ ಉತ್ತಪ್ಪ.
ಸನತ್ ರೈ








