ಬೆಂಗಳೂರು: ಪ್ರೇಮಕ್ಕೆ (Love) ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆಂಬ ಕಾರಣಕ್ಕೆ ವಿವಾಹಿತ ಮಹಿಳೆಯು ಯುವಕನೊಂದಿಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ದೊಡ್ಡಗುಬ್ಬಿ ನಿವಾಸದ ಅಪಾರ್ಟ್ಮೆಂಟ್ನಲ್ಲಿ (Apartment) ನಡೆದಿದೆ.
ಸೌಮಿನಿ ದಾಸ್ (20), ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎನ್ನಲಾಗಿದೆ. ಫ್ಲ್ಯಾಟ್ ನಲ್ಲಿ ಬೆಂಕಿ ನೋಡುತ್ತಿದ್ದಂತೆ ನಿವಾಸಿಗಳು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿದ್ದರು. ಕೂಡಲೇ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಮೃತ ಸೌಮಿನಿ ದಾಸ್ ಪಶ್ಚಿಮ ಬಂಗಾಳ ರಾಜ್ಯದವಳು. ಅವರು, ಕರಿಯಮ್ಮ ಆಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ (Nursing) ಓದುತ್ತಿದ್ದಳು. ಎರಡು ವರ್ಷಗಳ ಹಿಂದೆಯೇ ವಿವಾಹವಾಗಿತ್ತು ಕೂಡ. ಆದರೆ, ನರ್ಸ್ ಸರ್ವೀಸ್ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂನೊಂದಿಗೆ ಲವ್ ನಲ್ಲಿ ಬಿದ್ದಿದ್ದಳು. ಇವರಿಬ್ಬರ ಸ್ನೇಹದ ಬಗ್ಗೆ ಪತಿಗೂ ಗೊತ್ತಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರೇಮಿಗಳು ಮನೆ ಬಾಡಿಗೆ ಪಡೆದಿದ್ದರು. ಇದಕ್ಕೆ ಅವಳ ಪತಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.