ಶಿವಮೊಗ್ಗ: ಹಾವೇರಿ ಲೋಕಸಭಾ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಈಶ್ವರಪ್ಪ ಬಂಡಾಯದ ಕೂಗ ಹಾರಿಸಿದ್ದರು. ಈಗ ಅವರ ಮಗ ಕಾಂತೇಶ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಈಶ್ವರಪ್ಪ ಬಿಎಸ್ವೈ ಕುಟುಂಬದ ವಿರುದ್ಧ ಸಮರ ಸಾರಿದ್ದಾರೆ. ತಕ್ಕ ಪಾಠ ಕಲಿಸಲು ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಸ್ಪರ್ಧಿಸುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಸ್ಪರ್ಧೆ ಮಾಡುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ. ಹೀಗಾಗಿ ಪ್ರಚಾರ ಕಾರ್ಯ ಕೂಡ ಆರಂಭಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷ ತಂದೆ ಮಕ್ಕಳ ಕೈಗೆ ಸಿಕ್ಕಿದೆ. ನಾವು ಪಕ್ಷ ಸಂಘಟನೆ ವಿಚಾರಕ್ಕೆ ಯತ್ನಾಳ್, ಸಿಟಿ ರವಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು. ನಾನು ಹಿಂದುತ್ವದ ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ ಅಂತಾ ಚುನಾವಣೆ ಮಾಡುತ್ತಾರೆ. ಆದರೆ, ಅವರು ಲಿಂಗಾಯತರಿಗೆ ಏನೂ ಕೊಟ್ಟಿಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇದೇ ವಿಚಾರವಾಗಿ ಮಾತನಾಡಿದ ಕಾಂತೇಶ್, ಸಾಗರದ ವರದಹಳ್ಳಿ ಶ್ರೀಧರ್ ಆಶ್ರಮಕ್ಕೆ ಭೇಟಿ ನೀಡಿದ ನಂತರ ನಮ್ಮ ಹೋರಾಟ ಆರಂಭವಾಗಲಿದೆ. ನಮ್ಮ ಹೋರಾಟ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂದು ಹೇಳಿದ್ದಾರೆ.