ಖಾರ್ಟೂಮ್: ಸುಡಾನ್‍ನ (Sudan) ಸಿನ್ನಾರ್ ರಾಜ್ಯದ ಹಳ್ಳಿಯೊಂದರಲ್ಲಿ ಅರೆಸೇನಾ ಪಡೆಗಳು (RSF) ನಡೆಸಿದ ದಾಳಿಯಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.
ಬರೋಬ್ಬರಿ ಐದು ದಿನಗಳ ಮುತ್ತಿಗೆಯ ನಂತರ ಸಿನ್ನಾರ್ ರಾಜ್ಯದ (ಅಬು ಹುಜಾರ್ ಪ್ರದೇಶ) ಜಲ್ಕ್ನಿ ಗ್ರಾಮದ ಮೇಲೆ ಆರ್ ಎಸ್ ಎಫ್ ದಾಳಿ ನಡೆಸಿದೆ. ಅಲ್ಲದೇ, ಆರ್ ಎಸ್ ಎಫ್ ಗ್ರಾಮದಲ್ಲಿನ ಯುವತಿಯರನ್ನು ಅಪಹರಿಸಲು ಯತ್ನಿಸಿದೆ ಎನ್ನಲಾಗಿದೆ. ಇದಕ್ಕೆ ನಿವಾಸಿಗಳು ವಿರೋಧಿಸಿದಾಗ ಅವರ ಮೇಲೆ ಈ ದಾಳಿ ನಡೆಸಲಾಯಿತು. ಪರಿಣಾಮ ಕನಿಷ್ಠ 80 ಜನ ಸಾವನ್ನಪ್ಪಿದ್ದಾರೆ ಎಂದು ಸಿನ್ನಾರ್ ಯೂತ್ ಗ್ಯಾದರಿಂಗ್ ತಿಳಿಸಿದೆ.
ಆದರೆ, ಈ ಕುರಿತು ಆರ್‌ಎಸ್‌ಎಫ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೂನ್ ನಿಂದ ರಾಜ್ಯದ ರಾಜಧಾನಿ ಸಿಂಗಾ ಸೇರಿದಂತೆ ಸಿನ್ನಾರ್ ರಾಜ್ಯದ ಹೆಚ್ಚಿನ ಭಾಗಗಳನ್ನು ಆರ್ ಎಸ್ ಎಫ್ ನಿಯಂತ್ರಣದಲ್ಲಿದೆ. ಸುಡಾನ್ ನ ಸಶಸ್ತ್ರ ಪಡೆಗಳು ಪೂರ್ವ ಸಿನ್ನಾರ್ ಪ್ರದೇಶವನ್ನು ನಿಯಂತ್ರಿಸುತ್ತದೆ.
ಏ.15, 2023 ರಿಂದ ಸುಡಾನ್‍ನಲ್ಲಿ ಸೇನೆ ಹಾಗೂ ಆರೆಸೇನಾ ಪಡೆಗಳ ಮಧ್ಯೆ ಸಂಘರ್ಷ (Sudan Conflict) ನಡೆಯುತ್ತಿದೆ. ಈ ಸಂಘರ್ಷದಲ್ಲಿ ಕನಿಷ್ಠ 16,650 ಜೀವಗಳನ್ನು ಬಲಿ ಪಡೆಯಲಾಗಿದೆ. ಅಮೆರಿಕ, ಸೌದಿ ಅರೆಬಿಯಾ ಮತ್ತು ಸ್ವಿಸ್ ಮಧ್ಯಸ್ಥಿಕೆಯಲ್ಲಿ ಸ್ವಿಟ್ಜರ್ಲೆಂಡ್‍ನಲ್ಲಿ ಬುಧವಾರ ಕದನ ವಿರಾಮ ಮಾತುಕತೆ ಆರಂಭವಾಗಿದ್ದು, ಸುಡಾನ್ ಸೈನ್ಯವು ಭಾಗವಹಿಸಲು ನಿರಾಕರಿಸಿದೆ.







