ಪಾಲಕ್ಕಾಡ್: ಪ್ರಧಾನಿ ನರೇಂದ್ರ ಮೋದಿ ಕೇರಳದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ಅಲ್ಲಿನ ಎಲ್ ಡಿಎಫ್ ಹಾಗೂ ಯುಡಿಎಫ್ ವಿರುದ್ಧ ಗುಡುಗಿದ್ದಾರೆ.
ಕೇರಳದ ಜನರು ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಎರಡರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇವು ರಾಜ್ಯದ ಸ್ಥಿತಿಯನ್ನು ಹದಗೆಡಿಸುತ್ತಿವೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.
ಪಾಲಕ್ಕಾಡ್ ನಲ್ಲಿ ನಡೆದ ಸಾರ್ವಜನಿಕ ಸಭೆ ಉದ್ಧೇಶಿಸಿ ಮಾತನಾಡಿದ ಅವರು, ಕೇರಳ ಅಥವಾ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಎಡ ಸರ್ಕಾರಗಳು ಒಂದೇ ಆಗಿದ್ದು, ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕೆಲಸವನ್ನು ಅವು ಮಾಡುತ್ತಿವೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಯತ್ನಗಳಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಿಂದ ಕೇರಳದವರೆಗೆ ಎಲ್ಲಾ ಎಡಪಂಥೀಯ ಸರ್ಕಾರಗಳ ಸ್ವಭಾವ ಸಾಮಾನ್ಯವಾಗಿದೆ. ಈ ಪಕ್ಷಗಳಿಗೆ ಯಾವ ಎಡವೂ ಇಲ್ಲ, ಬಲವೂ ಇಲ್ಲ. ಕೇರಳದಲ್ಲಿ ಕಾಂಗ್ರೆಸ್ ಎಡ ಪಕ್ಷದ ಜನರನ್ನು ‘ಭಯೋತ್ಪಾದಕರು’ ಎಂದು ಕರೆಯುತ್ತದೆ. ಆದರೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಈ ‘ಭಯೋತ್ಪಾದಕರು’ ಒಟ್ಟಿಗೆ ಕುಳಿತು ಒಟ್ಟಿಗೆ ತಿನ್ನುತ್ತಾರೆ ಎಂದು ಗುಡುಗಿದ್ದಾರೆ.
ರಾಷ್ಟ್ರವಿರೋಧಿ ಧೋರಣೆಗಾಗಿ ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಸಂಘಟನೆಯೊಂದರ ರಾಜಕೀಯ ವಿಭಾಗದ ಜೊತೆ ಕಾಂಗ್ರೆಸ್ ಹಿಂಬಾಗಿಲ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.