ಲಾಕ್ ಡೌನ್ ಎಫೆಕ್ಟ್ ನಿಂದಾದ ಆರ್ಥಿಕ ನಷ್ಟವನ್ನು ತಗ್ಗಿಸಲು ಕೇಂದ್ರ ಸರ್ಕಾರ, ತೈಲದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಪೆಟ್ರೋಲ್ ಲೀಟರ್ ಗೆ 10 ರೂಪಾಯಿ ಮತ್ತು ಡೀಸೆಲ್ ಲೀಟರ್ ಗೆ 13 ರೂಪಾಯಿ ಏರಿಕೆ ಮಾಡಲಾಗಿದೆ.
ಒಂದು ಲೀಟರ್ ಪೆಟ್ರೋಲ್ ಮೇಲೆ 8 ರೂ. ರಸ್ತೆ ಮತ್ತು ಮೂಲಸೌಕರ್ಯ ಸೆಸ್, 2 ರೂ. ವಿಶೇಷ ಅಬಕಾರಿ ಸುಂಕ. ಪ್ರತಿ ಲೀಟರ್ ಡೀಸೆಲ್ ಮೇಲೆ 8 ರೂ. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹೇರಿದರೆ, 5 ರೂ. ವಿಶೇಷ ಅಬಕಾರಿ ಸುಂಕ ಹೇರಲಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಇಳಿಕೆ ಕಂಡಿದ್ದು ಬ್ಯಾರೆಲ್ಗೆ 30ಡಾಲರ್ನಷ್ಟಿದೆ. ಹೀಗಿದ್ದರೂ ಭಾರತೀಯರು ಪ್ರತಿ ಲೀಟರ್ ಪೆಟ್ರೋಲ್ಗೆ 70 ರೂಪಾಯಿ ಪಾವತಿ ಮಾಡುತ್ತಿದ್ದಾರೆ. ಅಂದರೆ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಮುಂಬರುವ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವುದಿಲ್ಲ.
ಇನ್ನು ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕ ಹೆಚ್ಚಿಸಿರುವುದು ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕರ್ನಾಟಕದಲ್ಲಿ ತೈಲ ದರ ಯಥಾಪ್ರಕಾರ ಇರಲಿದೆ. ಇದಕ್ಕೆ ಕಾರಣ ಲಾಕ್ಡೌನ್ ವೇಳೆ ತೈಲ ಸಾಗಣೆಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ ತೈಲ ಸಂಗ್ರಹವಿದೆ. ಒಂದು ವೇಳೆ ರಾಜ್ಯ ಸರ್ಕಾರ ಸುಂಕ ಹೆಚ್ಚಿಸಿದರೆ ಮಾತ್ರ ಗ್ರಾಹಕರ ಮೇಲೆ ಹೊರೆ ಬೀಳಲಿದೆ