ಬಾಗಲಕೋಟೆ : ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತಿನ ಮೂಲಕ ದೇಶದ ಜನರನ್ನು ಮರಳು ಮಾಡುವ ಕುತಂತ್ರ ಹೂಡಿದ್ದಾರೆ ಎಂದು ಮಾಜಿ ಸಚಿವ ಆರ್. ಬಿ ತಿಮ್ಮಾಪುರ ಅವರು ಕಿಡಿಕಾರಿದ್ದಾರೆ.ಬಾಗಲಕೋಟೆಯಲ್ಲಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿಯವರ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂಬ ಕರೆ ವಿಚಾರಕ್ಕೆ ತಿಮ್ಮಾಪುರ ವ್ಯಂಗ್ಯ ಮಾಡಿದರು. ರಾಷ್ಟ್ರವನ್ನು ಮೂಢನಂಬಿಕೆಗೆ ತಳ್ಳಿದ ಪ್ರಧಾನಿಯ ಕುತಂತ್ರ ನಡೆಯಿದು. ಚಪ್ಪಾಳೆ ಹೊಡೆಯುವುದರಿಂದ, ದೀಪ ಹಚ್ಚುವುದರಿಂದ ಕೊರೊನಾ ಹೋಗಲ್ಲ. ಮೋದಿ ಮಾತಿನಲ್ಲೇ ಜನರನ್ನು ಮರಳು ಮಾಡುವ ಕುತಂತ್ರ ಹೂಡಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಮದ್ಯ ಮಾರಾಟದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 6 ಜನರು ಸತ್ತಿದ್ದಾರೆ. ಆದರೆ ಸಾರಾಯಿ ಬಂದ್ ಆಗಿದ್ದಕ್ಕೆ 20 ಜನ ಸತ್ತಿದ್ದಾರೆ. ಅವುಗಳು ಕೂಡ ಜೀವಗಳೇ. ಸಾರಾಯಿಗೆ ಅಂಟಿಕೊಂಡವರು ಮನೋರೋಗಿಗಳಾಗುತ್ತಿದ್ದಾರೆ. ಅವರನ್ನು ಬದುಕಿಸುವ ಕಡೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಸರ್ಕಾರ ಎಂಎಸ್ ಐಎಲ್ ನ ಆರಂಭಿಸಿದರೆ ಒಳ್ಳೆಯದು. ಕೇರಳ ಮಾದರಿಯಲ್ಲಿ ಆನ್ ಲೈನ್ ಮಾರಾಟ ಮಾಡಲಿ ಎಂದು ಸಲಹೆ ನೀಡಿದರು.








