ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು 74ರ ಸಂಭ್ರಮಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಭುವನೇಶ್ವರದ ಗಡಕಾನಾದಲ್ಲಿ 26 ಲಕ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಅನಾವರಣಗೊಳಿಸಲಿದ್ದಾರೆ. ಭುವನೇಶ್ವರಕ್ಕೆ ಆಗಮಿಸಿದ ನಂತರ, ಮೋದಿ ಅವರು ಗಡಕಾನಾ ಕೊಳಚೆ ಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ನಂತರ ಪ್ರಧಾನಿ ಮೋದಿ ಅವರು ಜನತಾ ಮೈದಾನದಲ್ಲಿ ಪ್ರಧಾನಮಂತ್ರಿ ಸುಭದ್ರಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ಐದು ವರ್ಷಗಳ ಕಾಲ 1 ಕೋಟಿಗೂ ಅಧಿಕ ಬಡ ಮಹಿಳೆಯರಿಗೆ ಎರಡು ಸಮಾನ ಕಂತುಗಳಲ್ಲಿ ವಾರ್ಷಿಕ 10 ಸಾವಿರ ರೂ. ನೀಡಲಾಗುವುದು.
ಈ ಕಲ್ಯಾಣ ಯೋಜನೆಗಳೊಂದಿಗೆ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. 2,871 ಕೋಟಿ ರೂ. ಮೌಲ್ಯದ ರೈಲ್ವೆ ಮತ್ತು 1,000 ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಹುಟ್ಟು ಹಬ್ಬಕ್ಕೆ ಗಣ್ಯಾತಿಗಣ್ಯರೊಂದಿಗೆ ನಾಡಿನ ಜನರು ಶುಭ ಕೋರುತ್ತಿದ್ದಾರೆ.