ಮೋದಿ ಭದ್ರತಾ ಲೋಪ – ಫಿರೋಜ್‌ಪುರ ತಲುಪಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಭದ್ರತಾ ಲೋಪಗಳ ಕುರಿತು ಸುಪ್ರೀಂ ಕೋರ್ಟ್ ನೇಮಿಸಿದ್ದ ಸುಪ್ರೀಂ ಕೋರ್ಟ್ಮಾಜಿ ನ್ಯಾಯಾಧೀಶೆ ಇಂದು ಮಲ್ಹೋತ್ರಾ ನೇತೃತ್ವ ಐವರ ತಂಡ ತನಿಖೆ ನಡೆಸಲು ಫಿರೋಜ್‌ಪುರ ತಲುಪಿದೆ.
ತನಿಖೆ ನಡೆಸಲು ಮಾಜಿ ನ್ಯಾಯಾಧೀಶೆ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದೆ.
ಜನವರಿ 5 ರಂದು ಪ್ರಧಾನಿಯವರ ಬೆಂಗಾವಲು ಪಡೆ ಸುಮಾರು 20 ನಿಮಿಷಗಳ ಕಾಲ ನಿಂತಿದ್ದ ಫಿರೋಜ್‌ಪುರ-ಮೊಗಾ ರಸ್ತೆಯ ಪಿಯಾರಿಯಾನಾ ಗ್ರಾಮದ ಬಳಿಯ ರಸ್ತೆ ಮೇಲ್ಸೇತುವೆಗೆ ಸಮಿತಿಯು ಭೇಟಿ ನೀಡಿತು.
ಸುಮಾರು ಅರ್ಧ ಗಂಟೆ ಕಾಲ ಅಲ್ಲಿಯೇ ತಂಗಿದ್ದ ತಂಡ ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೆ, ಅಂದು ನಡೆದ ಘಟನೆಗಳ ಅನುಕ್ರಮವನ್ನು ಅವಲೋಕಿಸಲು ತಂಡವು ರ್ಯಾಲಿ ಸ್ಥಳ ಮತ್ತು ಫಿರೋಜ್‌ಶಾ ಗ್ರಾಮಕ್ಕೆ ಭೇಟಿ ನೀಡಿತು.
ಫಿರೋಜ್‌ಪುರದಲ್ಲಿ ರೈತರ ದಿಗ್ಬಂಧನದಿಂದಾಗಿ ಪ್ರಧಾನಿಯವರ ಬೆಂಗಾವಲು ಪಡೆ ಮೇಲ್ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ನಂತರ ಮೋದಿ ರ್ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದೆ ಪಂಜಾಬ್‌ನಿಂದ ಹಿಂತಿರುಗಿದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಪಂಜಾಬ್ ಸರ್ಕಾರವು ಪ್ರಧಾನಿ ಭೇಟಿಗಾಗಿ ಮಾಡಿದ ಭದ್ರತಾ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಎಲ್ಲಾ ದಾಖಲೆಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ಸಮಿತಿಯನ್ನು ನೇಮಿಸುವ ಮೊದಲು, ಕೇಂದ್ರ ತಂಡವು ಜನವರಿ 7 ರಂದು ಫಿರೋಜ್‌ಪುರಕ್ಕೆ ಭೇಟಿ ನೀಡಿತ್ತು. ಪಂಜಾಬ್ ಸರ್ಕಾರ ಕೂಡ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್ ಮತ್ತು ಗೃಹ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿತು.
ಎಸ್‌ಸಿ ನೇಮಿಸಿದ ಸಮಿತಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಇನ್ಸ್‌ಪೆಕ್ಟರ್ ಜನರಲ್, ಚಂಡೀಗಢದ ಪೊಲೀಸ್ ಮಹಾನಿರ್ದೇಶಕರು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್ ಪೊಲೀಸರ ಹೆಚ್ಚುವರಿ ಡಿಜಿಪಿ (ಭದ್ರತೆ) ಸಹ ಇದ್ದಾರೆ.