ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ
ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಮೈಸೂರು ಜಿಲ್ಲೆಯ ಹುಣಸೂರಿನ ಮೂರು ಲಾಡ್ಜ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಹುಣಸೂರಿನ ಹೊರವಲಯದಲ್ಲಿರುವ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಮಾಹಿತಿ ಆಧಾರದ ಮೇಲೆ ಒಡನಾಡಿ ಸೇವಾ ಸಂಸ್ಥೆಯ ತಂಡದೊಂದಿಗೆ ಹುಣಸೂರು ಪೊಲೀಸರು ಗುರುವಾರ ರಾತ್ರಿ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ರಾಜ್ಯದ ವಿವಿಧೆಡೆಗಳಿಂದ ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಒಡನಾಡಿ ಸೇವಾಸಂಸ್ಥೆಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ನಂತರ ಒಡನಾಡಿ ಸೇವಾಸಂಸ್ಥೆ ಎಸ್ಪಿ ಚೇತನ್ ಅವರಿಗೆ ವಿಷಯವನ್ನು ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಡಿವೈಎಸ್ಪಿ ರವಿಕುಮಾರ್ ಅವರು ವಿಶೇಷ ತಂಡವೊಂದನ್ನು ರಚಿಸಿದ್ದಾರೆ.
ಬಳಿಕ ಏಕಕಾಲದಲ್ಲಿ ಮೂರು ಲಾಡ್ಜ್ಗಳ ಮೇಲೆ ದಾಳಿ ನಡೆಸಿ ದಂಧೆ ನಡೆಸುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಣಸೂರಿನ ಹೊರವಲಯದಲ್ಲಿ ಇಂತಹ ದಂಧೆಗಳು ಹೆಚ್ಚಾಗಿದ್ದು, ದೆಹಲಿ, ಕೋಲ್ಕತ್ತಾ ಹಾಗೂ ಮುಂಬೈನಂತಹ ನಗರಗಳೊಂದಿಗೆ ನಂಟು ಇದೆ ಎನ್ನಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಹುಣಸೂರಿನ ಪೊಲೀಸರ ತಂಡದೊಂದಿಗೆ ಒಡನಾಡಿ ಸಂಸ್ಥೆಯ ನಿರ್ದೇಶಕರು ಹಾಗೂ ಸದಸ್ಯರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.








