ಜಾರ್ಖಂಡ್ ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆಸಿದ್ದು, ಜೆಎಂಎಂ ನಾಯಕ 43 ಶಾಸಕರೊಂದಿಗೆ ಹೈದರಾಬಾದ್ ಗೆ ಬಂದಿಳಿದಿದ್ದಾರೆ.
ಈಗ ಜಾರ್ಖಂಡ್ ನಲ್ಲಿ ಸಿಎಂ ಇಲ್ಲದೆ ಸುಮಾರು 24 ಗಂಟೆಗಳ ಕಾಲ ಕಳೆದಿದೆ. 81 ಸದಸ್ಯರ ವಿಧಾನಸಭೆಯಲ್ಲಿ ಜೆಎಂಎಂ (JMM) ನಾಯಕ 43 ಶಾಸಕರ ಬೆಂಬಲ ಪಡೆದಿದ್ದರೂ ರಾಜ್ಯದಲ್ಲಿ ಮುಂದಿನ ಸರ್ಕಾರ ರಚಿಸಲು ಜಾರ್ಖಂಡ್ ಮುಕ್ತಿ ಮೋರ್ಚಾದ ಹೊಸದಾಗಿ ಚುನಾಯಿತ ನಾಯಕ ಚಂಪೈ ಸೊರೆನ್ (Champai Soren) ಅವರಿಗೆ ಆಹ್ವಾನ ನೀಡಲು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ನಿರಾಕರಿಸಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಹೇಮಂತ್ ಸೊರೆನ್ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿದೆ. ಹೀಗಾಗಿ ಮುಂದಿನ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಚಂಪೈ ಸೊರೆನ್, ತಮಗೆ ಸಿಎಂ ಆಗಲು ಬೇಕಾಗಿರುವ ಬೆಂಬಲವಿದೆ ಎಂದು 43 ಶಾಸಕರು ತನ್ನೊಂದಿಗೆ ಇರುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಆನಂತರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು, ವಿಡಿಯೊ ಮತ್ತು ಬೆಂಬಲ ಪತ್ರಗಳ ಹೊರತಾಗಿಯೂ, ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿಲ್ಲ. ಆದರೆ, ಸದ್ಯದಲ್ಲಿಯೇ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಚಂಪೈ ಸೊರೆನ್ ಹೇಳಿದ್ದಾರೆ.
81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಯ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟವು ಜೆಎಂಎಂನ 29, ಕಾಂಗ್ರೆಸ್‌ನ 17 ಮತ್ತು ಆರ್‌ಜೆಡಿಯ 1 ಸೇರಿದಂತೆ 47 ಶಾಸಕರನ್ನು ಹೊಂದಿದೆ. ಬಿಜೆಪಿ 25 ಸದಸ್ಯರನ್ನು ಹೊಂದಿದೆ ಮತ್ತು ಎಜೆಎಸ್‌ಯು ಮೂವರು ಶಾಸಕರನ್ನು ಹೊಂದಿದೆ. ಎನ್ಸಿಪಿ ಮತ್ತು ಸಿಪಿಐ (ML) ತಲಾ ಒಬ್ಬ ಸದಸ್ಯರನ್ನು ಹೊಂದಿದ್ದು, ಮೂವರು ಪಕ್ಷೇತರರಿದ್ದಾರೆ.
ಹೀಗಾಗಿ ಶಾಸಕರನ್ನು ಹೊರಗೆ ಕಳುಹಿಸುವ ಕಾರ್ಯ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇರುವ ಹೈದರಾಬಾದ್‌ಗೆ ಶಾಸಕರನ್ನು ಕರೆತರಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೆಎಂಎಂ ನಾಯಕ ಹಾಗೂ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.