ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಅವರು ವಿದೇಶದಲ್ಲಿದ್ದಾರೆ. ಆದರೆ, ಸದ್ಯದಲ್ಲಿಯೇ ಪ್ರಜ್ವಲ್ ರೇವಣ್ಣ (Prajwal Revanna) ಎಸ್ ಐಟಿ ಎದುರು ಶರಣಾಗಲಿದ್ದಾರೆ ಎನ್ನಲಾಗುತ್ತಿದೆ.
ಯಾರೊಂದಿಗೂ ಸಂಪರ್ಕದಲ್ಲಿಲ್ಲದ ಪ್ರಜ್ವಲ್ ರೇವಣ್ಣ ಒಂದು ನಂಬರ್‌ಗೆ (Mobile Number) ಮಾತ್ರ ದಿನಕ್ಕೆರೆಡು ಬಾರಿ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಅವರು ಕರೆ ಮಾಡುತ್ತಿರುವುದು ಬೇರೆ ಯಾರಿಗೂ ಅಲ್ಲ, ತಾವು ಮದುವೆಯಾಗಲು ಮುಂದಾಗಿರುವ ಯುವತಿಗೆ ಕರೆ ಮಾಡುತ್ತಿದ್ದಾರ ಎಂದು ಮೂಲಗಳು ಹೇಳಿವೆ.
ಪ್ರಜ್ವಲ್ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ. ಹೀಗಾಗಿಯೇ ಆ ಯುವತಿಗೆ ದಿನಕ್ಕೆ ಎರಡು ಬಾರಿ ಕರೆ ಮಾಡಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ಮಾಹಿತಿ ತಿಳಿದಿರುವ ಎಸ್ ಐಟಿ ಸದ್ಯ ಆ ಯುವತಿಯ ಚಲನವಲನಗಳ ಮೇಲೆ ನಿಗಾ ವಹಿಸಿದೆ. ಆ ಮೂಲಕ ಪ್ರಜ್ವಲ್ ಇರುವ ಕುರಿತು ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಂದೆ ಹೆಚ್‌ಡಿ ರೇವಣ್ಣ (HD Revanna) ಬಂಧನಕ್ಕೆ ಒಳಗಾದ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ಅಲ್ಲದೇ, ಇಂದು ವಿಮಾನ ನಿಲ್ದಾಣಕ್ಕೆ (Mangaluru Airport) ಪ್ರಜ್ವಲ್ ಆಗಮಿಸುವ ಸಾಧ್ಯತೆಯಿದೆ. ಸದ್ಯ ಪ್ರಜ್ವಲ್ ಯುಎಇಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲುಕೌಟ್ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ವಿಮಾನದಿಂದ ಇಳಿದು ವಲಸೆ ಕೇಂದ್ರದ ಬಳಿಯೇ ಬಂಧನವಾಗುವ ಸಾಧ್ಯತೆ ಕೂಡ ಇದೆ.