ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರಲ್ಲಿ ಕಲೆ ಮತ್ತು ಅದರ ಸ್ಥಿರತೆ ಎಂಬ ವಿಷಯದ ಕುರಿತು ಮಾತನಾಡಿದ್ದ ನಟ ಪ್ರಕಾಶ್ ರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆ ವಿಡಿಯೋದಲ್ಲಿ ಅವರು ಶ್ರೀರಾಮ ಮತ್ತು ರಾಮಾಯಣವನ್ನು ವ್ಯಂಗ್ಯ ಮಾಡುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಆಕ್ರೋಶದ ಕಟ್ಟೆಯೊಡೆದಿದ್ದು, ಅನೇಕರು ನಟನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.
ತಮ್ಮ ಮೇಲಿನ ಈ ಆರೋಪಗಳಿಗೆ ಇದೀಗ ನಟ ಪ್ರಕಾಶ್ ರಾಜ್ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ವಿರೋಧಿಗಳ ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಸಂವಾದದ ಸುದೀರ್ಘ ವಿಡಿಯೋದಲ್ಲಿ ಕೇವಲ ಕೆಲವು ಮಾತುಗಳನ್ನು ಮಾತ್ರ ಕತ್ತರಿಸಿ, ಅದನ್ನು ತಿರುಚಿ ಸಮಾಜದಲ್ಲಿ ತಪ್ಪು ಸಂದೇಶ ರವಾನಿಸಲಾಗುತ್ತಿದೆ. ನಾನು ಅವತಾರ ಪುರುಷ ಶ್ರೀರಾಮನ ಬಗ್ಗೆ ವ್ಯಂಗ್ಯ ಮಾಡಿಲ್ಲ. ಎಲ್ಲಾ ಧರ್ಮಗಳನ್ನು ಗೌರವಿಸುವ ಗುಣ ನನ್ನದು, ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಕಾಶ್ ರಾಜ್, ಧರ್ಮವನ್ನು ಮತಾಂಧತೆಯನ್ನಾಗಿ ಮಾಡಿಕೊಂಡು ಅಸಹ್ಯ ರಾಜಕೀಯ ಮಾಡುತ್ತಿರುವವರಿಗೆ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಹತಾಶ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಅವರ ಕಷ್ಟ ಮತ್ತು ನೋವು ನನಗೆ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಸದ್ಯ ತಮಿಳುನಾಡು ಚುನಾವಣೆ ಮುಗಿದಿದ್ದು, ನಾನು ನನ್ನ ತೋಟದ ಕೆಲಸಗಳಲ್ಲಿ ಮಗ್ನನಾಗಿದ್ದೇನೆ. ಮಳೆಗಾಲ ಆರಂಭವಾಗುವ ಮುನ್ನ ಕೆಲಸ ಮುಗಿಸಬೇಕಿದೆ, ಅಲ್ಲಿಯವರೆಗೂ ನೀವು ಇಂತಹ ತಂಟೆ ತರಲೆಗಳನ್ನು ಮಾಡುತ್ತಿರುತ್ತೀರೋ ಅಥವಾ ನಿಮ್ಮ ಕೆಲಸ ನೋಡಿಕೊಳ್ಳುತ್ತೀರೋ ಅದು ನಿಮಗೆ ಬಿಟ್ಟಿದ್ದು ಎಂದು ತಿರುಗೇಟು ನೀಡಿದ್ದಾರೆ.
ಈ ವಿವಾದದ ಬೆನ್ನಲ್ಲೇ ಪ್ರಕಾಶ್ ರಾಜ್ ಅವರಿಗೆ ಕಾನೂನು ಸಂಕಷ್ಟವೂ ಎದುರಾಗಿದೆ. ಟಿಟಿಡಿ ಮಂಡಳಿಯ ಭಾನುಪ್ರಕಾಶ್ ರೆಡ್ಡಿ ಎಂಬುವವರು ನಟನಿಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕಾಶ್ ರಾಜ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು, ಇಲ್ಲವಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಹಲವು ಹಿಂದೂಪರ ಸಂಘಟನೆಗಳು ನಟನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಅವರನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿವೆ. ಸದ್ಯ ಪ್ರಕಾಶ್ ರಾಜ್ ಅವರ ಈ ಹೇಳಿಕೆ ಮತ್ತು ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳು ರಾಜ್ಯಾದ್ಯಂತ ಸಂಚಲನ ಮೂಡಿಸಿವೆ.







