ಪ್ರಮೋದ್ ಸಾವಂತ್ ಗೋವಾ ಸಿಎಂ: ಶಾಸಕಾಂಗ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ
ಗೋವಾದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ನಡೆದ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಾಸಕಾಂಗ ಪಕ್ಷದ ಸಭೆಯಲ್ಲಿ, ಪ್ರಮೋದ್ ಸಾವಂತ್ ಗೋವಾ ಸಿಎಂ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಶ್ವಜಿತ್ ರಾಣೆ ಅವರು ಸಾವಂತ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಗೋವಾದ ಬಿಜೆಪಿ ಕೇಂದ್ರ ವೀಕ್ಷಕ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ 11 ದಿನಗಳ ನಂತರ ಸಭೆ ನಡೆದಿದೆ. ಬಿಜೆಪಿಯ ಕೇಂದ್ರ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್ ಮುರುಗನ್ ಅವರು ಇಂದು ಮಧ್ಯಾಹ್ನ ಇಲ್ಲಿಗೆ ಆಗಮಿಸಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅಗತ್ಯಕ್ಕಿಂತ ಒಂದು ಸ್ಥಾನ ಕಡಿಮೆಯಾಗಿದೆ. ಎಂಜಿಪಿಯ ಇಬ್ಬರು ಶಾಸಕರು ಮತ್ತು ಮೂವರು ಪಕ್ಷೇತರರ ಬೆಂಬಲವನ್ನು ಬಿಜೆಪಿ ಪಡೆದುಕೊಂಡಿದೆ. ಇದು ಹೊಸ ವಿಧಾನಸಭೆಯಲ್ಲಿ ಸಂಖ್ಯಾಬಲದ ದೃಷ್ಟಿಯಿಂದ ಬಿಜೆಪಿಗೆ ನೆಮ್ಮದಿ ತಂದಿದೆ. ಸಾವಂತ್ ಅವರ ಹೆಸರನ್ನು ಸೀಲ್ ಮಾಡಿದ ನಂತರ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಬಿಜೆಪಿ ನಾಯಕರು ಮತ್ತು ಶಾಸಕರು ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಅವರನ್ನು ರಾಜಭವನದಲ್ಲಿ ಭೇಟಿಯಾಗಲಿದ್ದಾರೆ.