ಕೊಡಗು : ಬೆಂಗಳೂರು ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎಸ್ ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಭಾಗಮಂಡಲದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದು ಎಸ್‌ಡಿಪಿಐನ ಪುಂಡರು. ಎಸ್ ಡಿಪಿಐ ಮತ್ತು ಪಿಎಫ್‌ಐ ಅನ್ನು ನಿಷೇಧಿಸಬೇಕು. ಎಸ್ ಡಿಪಿಐ ನಿಷೇಧದ ಬಗ್ಗೆ ಗೃಹ ಸಚಿವರೇ ಸ್ಪಷ್ಟವಾಗಿ ಹೇಳಿದ್ದಾರೆ. ಮಂಗಳೂರು ಘಟನೆ ನಂತರ ಆ ಪ್ರಕ್ರಿಯೆ ಶುರುವಾಗಿದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಮೇಲೆ ವಿಶ್ವಾಸ ಇದೆ ಎಂದು ಹೇಳಿದರು.
ಇದೇ ವೇಳೆ ದಿನೇಶ್ ಗುಂಡೂರಾವ್ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ ನ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಶಿಕ್ಷಣವಂತರು, ಒಳ್ಳೆಯ ಹಿನ್ನೆಲೆ ಇರುವವರು. ಆದ್ರೆ ಯಾವಾಗಲೂ ಜನರ ದಾರಿ ತಪ್ಪಿಸುತ್ತಿರುತ್ತಾರೆ ಎಂದು ಕುಟುಕಿದರು.
ಮುಂದುವರಿದು, ಕಾಂಗ್ರೆಸ್ ಶಾಸಕರ ಮನೆ ಮೇಲೆ ಎಸ್ ಡಿಪಿಐ ದಾಂಧಲೆ ನಡೆಸಿದೆ. ಆದರೂ ದಿನೇಶ್ ಗುಂಡೂರಾವ್ ಗೆ ಆ ಸಂಘಟನೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ದರ್ದು ಏನಿದೆ ಎಂದು ಪ್ರಶ್ನಿಸಿದ ಸಂಸದರು, ಅವರಿಗೆ ಮನೆಯಲ್ಲಿ ಒತ್ತಡ ಇರಬಹುದೇನೋ ಎಂದು ಲೇವಡಿ ಮಾಡಿದ್ದಾರೆ.









