ಮಾಧ್ಯಮದವರ ಪ್ರಶ್ನೆಗೆ ಸಿಎಂ ಗರಂ : ಪ್ರೆಷರ್ ಕುಕ್ಕರ್ ನಂತಾದ್ರಾ ರಾಜಾಹುಲಿ
ಬೆಂಗಳೂರು : “ಏ ನೀನೇನು ತಲೆಕೆಡಿಸಿಕೊಳ್ಳಬೇಡ, ಸರ್ಕಾರ ಹೇಗೆ ನಡೆಸಬೇಕು ಅಂತ ನಮಗೆ ಗೊತ್ತಿದೆ”..! ಇದು ಹುಬ್ಬಳ್ಳಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ.
ಇಷ್ಟಕ್ಕೂ ಆಗಿದ್ದು ಇಷ್ಟು, ಹುಬ್ಬಳ್ಳಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಿಗೆ ನೌಕರರ ಮುಷ್ಕರದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುತ್ತಾರೆ. ಈ ವೇಳೆ ಸುದ್ದಿಗಾರರೊಬ್ಬರು ” ಸರ್..! ಇನ್ಶೂರೆನ್ಸ್, ಪರ್ಮಿಟ್ ಲ್ಯಾಪ್ಸ್ ಆದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಏನಾದ್ರೂ ಅಪಾಯವಾದ್ರೆ, ಜನರಿಗೆ ತೊಂದರೆಯಾದರೆ ಯಾರು ಹೊಣೆ” ಎಂದು ಪ್ರಶ್ನೆ ಮಾಡುತ್ತಾರೆ. ಇದರಿಂದ ಗರಂ ಆದ ಬಿಎಸ್ ವೈ, “ಏ ನೀನೇನು ತಲೆಕೆಡಿಸಿಕೊಳ್ಳಬೇಡ, ನೀನು ಜವಾಬ್ದಾರಿ ತಗೋಬೇಡ, ನಮಗೆ ಗೊತ್ತಿದೆ ಸರ್ಕಾರ ಹೇಗೆ ನಡೆಸಬೇಕು” ಎಂದು ಬುಸುಗುಟ್ಟಿದರು.
ಪ್ರಷರ್ ಕುಕ್ಕರ್ ನಂತಾದ್ರಾ ಸಿಎಂ..?
ಸದ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ವರ್ತನೆ ನೋಡಿದ್ರೆ ಅವರು ತುಂಬಾ ಒತ್ತಡದಲ್ಲಿರುವಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಅವರ ಈ ರೀತಿ ಗರಂ ಆಗಿದ್ದಾರೆ ಅಂತ ಕೂಡ ಹೇಳಲಾಗುತ್ತಿದೆ. ಯಾಕೆಂದ್ರೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಾಮಾನ್ಯವಾಗಿಯೇ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಈ ಪ್ರಕರಣ ಸರ್ಕಾರಕ್ಕೆ ಡ್ಯಾಮೆಜ್ ಮಾಡಿರುವುದು ನೂರಕ್ಕೆ ನೂರು ಸತ್ಯ. ಇದರ ಜೊತೆಗೆ ಪಕ್ಷದಲ್ಲಿರುವ ಅಸಮಾಧಾನದ ಹೊಗೆ ಬಿಎಸ್ ವೈಗೆ ನಿದ್ದೆಗೆಡಿಸಿದೆ. ಅದರಲ್ಲೂ ಈಶ್ವರಪ್ಪ ಹೈಕಮಾಂಡ್ಗ ಗೆ ಪತ್ರ ಬರೆದಿದ್ದು, ಆ ನಂತರ ಅವರ ಹೇಳಿಕೆ ಎಲ್ಲವೂ ಸಿಎಂಗೆ ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ.
ಇನ್ನು ಉಪಚುನಾವಣೆ, ಈ ಬೈ ಎಲೆಕ್ಷನ್ ಬಿಎಸ್ ವೈ ಪಾಲಿಗೆ ಬಹು ಮುಖ್ಯವಾದದ್ದು, ಯಾಕೆಂದ್ರೆ ಕೊರೊನಾ ಸಂಕಷ್ಟ, ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ, ವಿರೋಧ ಪಕ್ಷಗಳ ಟೀಕೆಗಳಿಗೆ ಈ ಎಲೆಕ್ಷನ್ ನಲ್ಲಿ ಗೆದ್ದು ಉತ್ತರ ಕೊಡುವ ಉದ್ದೇಶ ಸಿಎಂ ಅವರಿಗಿದೆ. ಇದೇ ಕಾರಣಕ್ಕೆ ಸಿಎಂ ಈ ಬೈ ಎಲೆಕ್ಷನ್ ನಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠದಲ್ಲಿದ್ದಾರೆ. ಇದು ಸಾಲದ್ದು ಎಂಬಂತೆ ಇದೀಗ ಸಾರಿಗೆ ನೌಕರರ ಅನಿರ್ಧಿಷ್ಟಾವದಿ ಮುಷ್ಕರ ಕೂಡ ಯಡಿಯೂರಪ್ಪ ಅವರನ್ನ ಇಕ್ಕಟ್ಟಿಗೆ ಸಿಲುಕಿಸಿರುವುದು ಕೂಡ ಸುಳ್ಳಲ್ಲ.
ಈ ಎಲ್ಲಾ ಒತ್ತಡ ಸಮಸ್ಯೆಗಳು ಒಂದು ಕಡೆಯಾದ್ರೆ ಕೊರೊನಾ ಎರಡನೇ ಅಲೆ ಸಿಎಂ ಅವರಿಗೆ ತಲೆನೋವು ತಂದಿದೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳನ್ನ ಚಾಚುತ್ತಲೇ ಸಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದ್ರೂ ಕೆಲ ಆದಾಯ ಮೂಲಗಳು ಕೈ ಕಟ್ಟಿ ಹಾಕುತ್ತಿವೆ. ಒಂದು ವೇಳೆ ಕೊರೊನಾ ಹೆಚ್ಚಾಗಿ ಲಾಕ್ ಡೌನ್ ಸಂದರ್ಭ ಬಂದ್ರೆ ಈಗಾಗಲೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಈ ಎಲ್ಲಾ ಒತ್ತಡ, ಸಂಕಷ್ಟ, ತೊಂದರೆಗಳಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಷರ್ ಕುಕ್ಕರ್ ನಂತಾಗಿದ್ದಾರೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
