Pro Kabaddi : ಸೀಸನ್ 9 ರ ಚಾಂಪಿಯನ್ ಕೈಪುರ್ ಪಿಂಕ್ ಪ್ಯಾಂಥರ್ಸ್ – ಫೈನಲ್ ನಲ್ಲಿ ಸೋತ ಪುಣೇರಿ
ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ರೋಚಕ ಹಣಾಹಣಿಯಲ್ಲಿ ಬಲಿಷ್ಠ ಪ್ರದರ್ಶನ ನೀಡಿದ ಜೈಪುರ್ ಪಿಂಕ್ ಪ್ಯಾಂಥರ್ಸ್, ಪ್ರೋ ಕಬಡ್ಡಿ ಲೀಗ್(ಪಿಕೆಎಲ್) 9ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನ ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್(ಎಸ್‌ವಿಪಿ) ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಎರಡು ತಂಡಗಳು ಪ್ರಬಲ ಪೈಪೋಟಿ ನಡೆಸಿದವು. ಆದರೆ ಕೊನೆಯ ಕ್ಷಣದವರೆಗೂ ನಡೆದ ಹೋರಾಟದಲ್ಲಿ ಪ್ರಾಬಲ್ಯ ಸಾಧಿಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್ 33-29 ಅಂಕಗಳೊಂದಿಗೆ ಜಯಭೇರಿ ಬಾರಿಸುವ ಮೂಲಕ 9ನೇ ಆವೃತ್ತಿಯ ಚಾಂಪಿಯನ್‌ಪಟ್ಟಕ್ಕೇರಿತು. ಇದು ಜೈಪುರ್ ತಂಡಕ್ಕೆ ದೊರೆತ ಎರಡನೇ PKL ಟ್ರೋಫಿಯಾಗಿದ್ದು, ಈ ಹಿಂದೆ 2014ರಲ್ಲಿ ನಡೆದ ಚೊಚ್ಚಲ PKL ಟೂರ್ನಿಯಲ್ಲಿ ಜೈಪುರ್ ತಂಡ ಪ್ರಶಸ್ತಿ ಗೆದ್ದುಬೀಗಿತ್ತು.
ಫೈನಲ್ ಪಂದ್ಯದ ಆರಂಭದಿಂದಲೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಜೈಪುರ್ ಪರ ಅರ್ಜುನ್ ದೇಸ್ವಾಲ್ ಹಾಗೂ ಅಜಿತ್ ಕುಮಾರ್ ಆರಂಭದಿಂದಲೇ ಪುಣೇರಿ ಪಲ್ಟನ್ ತಂಡದ ಭದ್ರಕೋಟೆಯನ್ನ ಭೇದಿಸಿ ರೈಡ್ ಪಾಯಿಂಟ್‌ಗಳನ್ನ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮತ್ತೊಂದೆಡೆ ಪುಣೇರಿ ಆಟಗಾರರು ಸಹ ಪಿಂಕ್ ಪ್ಯಾಂಥರ್ಸ್‌ಗೆ ಪ್ರಬಲ ಪೈಪೋಟಿ ನೀಡಿದರು. ಪರಿಣಾಮ ಪಂದ್ಯದ ಮೊದಲಾರ್ಧದಲ್ಲಿ ಜೈಪುರ್ ತಂಡಕ್ಕೆ 14-12ರ ಮುನ್ನಡೆ ಪಡೆಯಲಷ್ಟೇ ಸಾಧ್ಯವಾಯಿತು.
ಪಂದ್ಯದ ಎರಡನೇ ಅವಧಿಯಲ್ಲೂ ಎರಡು ತಂಡಗಳು ಮತ್ತಷ್ಟು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೆ ಮೊದಲಾರ್ಧದಲ್ಲಿ ದೊರೆತ ಮುನ್ನಡೆಯನ್ನ ಕಳೆದುಕೊಳ್ಳದ ಜೈಪುರ್ ಕೊನೆಯಲ್ಲಿ 33-29ರ ಅಂತರದೊಂದಿಗೆ ಪಂದ್ಯವನ್ನ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಜೈಪರ್ ಪರ ಅರ್ಜುನ್ ದೇಸ್ವಾಲ್, ಅಜಿತ್ ರೈಡಿಂಗ್‌ನಲ್ಲಿ ಮಿಂಚಿದರೆ. ಡಿಫೆನ್ಸ್‌ನಲ್ಲಿ ನಾಯಕ ಸುನೀಲ್ ಕುಮಾರ್ ಹಾಗೂ ಉಳಿದ ಆಟಗಾರರು ಸಂಘಟಿತ ಪ್ರದರ್ಶನ ನೀಡಿದರು.
ಮತ್ತೊಂದೆಡೆ ಚೊಚ್ಚಲ PKL ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಪುಣೇರಿ ಪಲ್ಟನ್ ಪರ ಆಕಾಶ್ ಶಿಂಧೆ ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ. ಡಿಫೆನ್ಸ್‌ನಲ್ಲಿ ನಾಯಕ ಫಜ಼ಲ್ ಅತ್ರಾಚಲಿ, ಅಭಿನಾಶ್ ಸಹ ಉತ್ತಮ ಆಟವಾಡಿದರು. ಮೊಹಮ್ಮದ್ ನಭೀಭಕ್ಷ್ ಆಲ್ರೌಂಡ್ ಪ್ರದರ್ಶನ ನೀಡಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪುಣೇರಿ ಪಲ್ಟನ್ ತಂಡದ ಪ್ರಶಸ್ತಿ ಗೆಲ್ಲುವ ಕನಸು ಸಹ ನನಸಾಗಲಿಲ್ಲ.