ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಹಣತೆ, ಮೇಣದ ಬತ್ತಿ ಹೊತ್ತಿಸುವ, ಮೊಬೈಲ್ ಟಾರ್ಚ್ ಆನ್ ಮಾಡುವ ಮೂಲಕ ಕೊರೊನಾ ವಿರುದ್ಧ ದೇಶವೆಲ್ಲ ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ಸಾರೋಣ ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು. ಇದಕ್ಕೆ ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಅವರು ದೀಪ ಹಚ್ಚಿ ಎಂದು ಹೇಳುವಾಗ ಯಾರು ಮನೆಯಿಂದ ಹೊರಗಡೆ ಬಾರದೇ ಮನೆಯಲ್ಲೇ ದೀಪ ಬೆಳಗಿಸಬೇಕು ಎಂದು ಒತ್ತಿ ಹೇಳಿದ್ದರು.
ಆದ್ರೆ ಇಂದು ಕೆಲವರು ರಸ್ತೆಗಿಳಿದು ದೀಪಗಳನ್ನು ಹಿಡಿದು ಗುಂಪು ಗುಂಪಾಗಿ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಹಿಂದೆ ಜನತಾ ಕರ್ಫ್ಯೂ ಸಮಯದಲ್ಲೂ ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ತಟ್ಟಿ ವೈದ್ಯಕೀಯ ಸಿಬ್ಬಂದಿಗೆ ಅಭಿನಂದಿಸಿ ಅಂತ ಪ್ರಧಾನಿ ಸೂಚಿಸಿದ್ದ ಹಿನ್ನೆಲೆಯಲ್ಲಿ ಅವರ ತವರು ರಾಜ್ಯ ಗುಜರಾತ್ನ ಅಹಮದಾಬಾದ್ನ ಖಾದಿಯಾ ಪ್ರದೇಶದಲ್ಲಿ ಬೀದಿಗಿಳಿದಿದ್ರು. ನೂರಾರು ಜನ ಭಾರತದ ಬಾವುಟ ಹಿಡಿದು, ಜಾಗಟೆ ಹಿಡಿದು ಮೆರವಣಿಗೆ ನಡೆಸಿದ್ರು. ಆ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ರು. ಅಲ್ಲಿಗೆ ಜನತಾ ಕರ್ಫ್ಯೂ ಉದ್ದೇಶವೇ ಮಣ್ಣುಪಾಲಾಗಿತ್ತು. ಇದು ರಿಪೀಟ್ ಆಗಬಾರದೆಂದು ಪ್ರಧಾನಿ ಮೋದಿ ಅವರು ಮೊನ್ನೆ ತಮ್ಮ ವಿಡಿಯೋದಲ್ಲಿ ಪದೇಪದೇ ಮನವಿ ಮಾಡಿಕೊಂಡಿದ್ದರು. ಆದರೂ ಕೆಲವರು ಇಂದು ದೀಪ ಬೆಳಗಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಉದ್ದೇಶಕ್ಕಾಗಿ ಲಾಕ್ಡೌನ್ ಮಾಡ್ಲಾಗಿದ್ಯೋ ಆ ಉದ್ದೇಶವನ್ನೇ ಮರೆತು ಜನ ಜೊತೆ ಸೇರಿ ಕೊರೊನಾ ಭೀತಿ ಹೆಚ್ಚಿಸಿರೋದಕ್ಕೆ ಕಿಡಿಕಾರಿದ್ದಾರೆ.








