ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್, ಮಾಜಿ ಸಚಿವರಾದ ಭೈರತಿ ಬಸವರಾಜ್, ಗೋಪಾಲಯ್ಯ, ಮುನಿರತ್ನ ಸೇರಿದಂತೆ ಬೆಂಗಳೂರು ಶಾಸಕರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಸಿಂಗಾಪುರ್, ಬ್ರಾಂಡ್ ಬೆಂಗಳೂರು ಮಾಡತ್ತೇವೆ ಅಂತಾ ಹೇಳಿದರು. ಆದರೆ, ವರ್ಷ ಕಳೆದರೂ ಬೆಂಗಳೂರಿಗೆ ಒಂದು ರೂಪಾಯಿನೂ ಬಿಡುಗಡೆ ಮಾಡಿಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕಾಂಗ್ರೆಸ್ ದೆಹಲಿಯಲ್ಲಿ ಹೋರಾಟ ಮಾಡಿದರು. ಈಗ ಬೆಂಗಳೂರು ಜನ ನಮ್ಮ ಬೆಂಗಳೂರು ತೆರಿಗೆ, ನಮ್ಮ ಹಕ್ಕು ಅಂತಾ ಇದ್ದಾರೆ. ಬೆಂಗಳೂರಿಂದ ಶೇ. 65ರಷ್ಟು ತೆರಿಗೆ ಬರುತ್ತಿದೆ. ಆದರೂ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಇನ್ನೂ ಸರಿಯಾಗಿ ಮಳೆಯಾಗಿಲ್ಲ. ಆಗಲೇ ರಸ್ತೆಗಳು ಗುಂಡಿಮಯವಾಗಿವೆ. ಜನವರಿಯಿಂದ ಕಸ ಎತ್ತುವವರಿಗೆ ಸಂಬಳ ಕೊಟ್ಟಿಲ್ಲ. ಇಡೀನ ಬೆಂಗಳೂರು ಕಸದಲ್ಲಿ ಹೂತು ಹೋಗಿದೆ. ಆದರೂ ಒಂದು ನಯಾ ಪೈಸೆ ಹಣ ಕೊಟ್ಟಿಲ್ಲ. ಮುಖ್ಯಮಂತ್ರಿ ಅವರದ್ದು ಹೋದ ಸಿದ್ದ ಬಂದ ಸಿದ್ದ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಮಾತನಾಡಿ, ಕಾಂಗ್ರೆಸ್ ಇಡೀ ಬೆಂಗಳೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅದಕ್ಕೆ ಎಚ್ಚರಿಕೆ ನೀಡುವುದಕ್ಕಾಗಿ ಈ ಪ್ರತಿಭಟನೆ ನಡೆಸುತ್ತಿದ್ದೇವೆ. ರಾಜಕಾಲುವೆ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ, ಆ ಹಣವನ್ನೇ ಖರ್ಚು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕಿವಿ ಕಿವುಡಾಗಿದೆ. ಒಂದೇ ವರ್ಷದಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಜನ ಯಾವಾಗ ಗುಂಡಿಯಲ್ಲಿ ಬಿದ್ದು ಸಾಯಿತಾರೋ ಗೊತ್ತಿಲ್ಲ. ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಸಿಎಂ ರಾಜೀನಾಮೆ ನೀಡಬೇಕು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಿಎಂ, ಡಿಸಿಎಂ, ಸಚಿವರು ಚೆಕ್ ಬರೆಸಿಕೊಂಡಿರುವುದು ನಮಗೆ ಗೊತ್ತಿದೆ ಎಂದು ಆರೋಪ ಮಾಡಿದರು.