ಮೈಸೂರು ; ಅನುದಾನ ರಹಿತ ಖಾಸಗಿ ಶಾಲಾ ಕಾಲೇಜು ಉಪನ್ಯಾಸಕರು ಮತ್ತು ಶಿಕ್ಷಕೇತರರಿಗೆ ಕೋವಿಡ್-19 ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜು ಬೋಧಕ ಮತ್ತು ಬೋಧಕೇತರರ ಸಂಘದ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೇಳೆ ಸಂಘದ ಉಪಾಧ್ಯಕ್ಷ ಡಾ.ಅಂತೋಣಿ ಪಾಲ್ ರಾಜ್ ಮಾತನಾಡಿ, ಕೋವಿಡ್-19 ಪರಿಸ್ಥಿತಿಯಿಂದ ಖಾಸಗಿ, ಅನುದಾನರಹಿತ ಶಾಲಾ ಕಾಲೇಜು ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಬೀದಿ ಪಾಲಾಗಿದ್ದು ಪರಿಹಾರ ನೀಡಬೇಕು.
ಖಾಸಗಿ ಅನುದಾನ ರಹಿತ ಶಿಕ್ಷಕ ಮತ್ತು ಶಿಕ್ಷಕೇತರ ಕುಟುಂಬಗಳಿಗೆ ಕೋವಿಡ್ ವೈರಸ್ ತಗುಲಿದರೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಕಳೆದ ಮಾರ್ಚ್ ನಿಂದ ಮುಂದಿನ ಶೈಕ್ಷಣಿಕ ಶಾಲಾ ವರ್ಷ ಆರಂಭವಾಗುವವರೆಗೆ ಪರಿಹಾರ ನೀಡಬೇಕು. ಈ ಪರಿಹಾರವನ್ನು ಟೀಚರ್ ವೆಲ್ಫೆರ್ ಫಂಡ್ ಮತ್ತು ಸ್ಟೂಡೆಂಟ್ ವೆಲ್ಫೆರ್ ಫಂಡ್ ಕಲ್ಯಾಣ ನಿಧಿಯನ್ನು ಬಳಸಿಕೊಳ್ಳುವುದರ ಮೂಲಕ ಪರಿಹಾರ ನೀಡಬೇಕು. ಆರ್ ಟಿಐ ಯೋಜನೆಗೆ ಒಳಪಡದ ಖಾಸಗಿ ಶಾಲಾ ಕಾಲೇಜು ಮತ್ತು ಪದವಿ ಕಾಲೇಜುಗಳ ಶಿಕ್ಷಕ ಮತ್ತು ಉಪನ್ಯಾಸಕರಿಗೂ ಕೂಡ ಪರಿಹಾರ ಘೋಷಣೆ ಮಾಡಬೇಕು. ಕೋವಿಡ್-19 ರ ಪ್ರಭಾವ ಖಾಸಗಿ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷದ ದಾಖಲಾತಿಗಳ ಪ್ರಭಾವ ಬೀರುವ ಹಿನ್ನೆಯಲ್ಲಿ ವಿವಿಗಳು ಕಾಲೇಜುಗಳ ಸಂಯೋಜಿತ ಶುಲ್ಕವನ್ನು ಮನ್ನಾ ಮಾಡಬೇಕೆಂದು ವಿವಿಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ರಾಜಶೇಖರ್ ಮೂರ್ತಿ ಸೇರಿದಂತೆ 30 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.