ಚಂಡೀಗಢ: ಡೆಲ್ಲಿ ವಿರುದ್ಧ ಪಂಜಾಬ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಸ್ಯಾಮ್ ಕರ್ರನ್ ಅಮೋಘ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ದಾಖಲಿಸಿದೆ. ಪಂಜಾಬ್ ಗೆಲುವಿಗೆ ಕೊನೆಯ ಓವರ್ನಲ್ಲಿ 6 ರನ್ ಗಳ ಅಗತ್ಯವಿತ್ತು. ಸುಮಿತ್ ಕುಮಾರ್ ಆರಂಭದಲ್ಲೇ 2 ವೈಡ್ ಎಸೆದರು. ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲವಾದರೂ ಕ್ರೀಸ್ ನಲ್ಲಿದ್ದ ಲಿಯಾಮ್ ಲಿವಿಂಗ್ಸ್ಟೋನ್ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ, ಗೆಲುವು ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. 175 ರನ್ ಗಳ ಗುರಿ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ 19.2 ಓವರ್ಗಳಲ್ಲೇ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಗೆಲುವಿನ ನಗೆ ಬೀರಿತು.
ಕಿಂಗ್ಸ್ ಪಂಜಾಬ್ ಗೆ ಕೂಡ ಉತ್ತಮ ಆರಂಭ ಸಿಗಲಿಲ್ಲ. ಬೇಗನೆ ಎರಡು ವಿಕೆಟ್ ಕಳೆದುಕೊಂಡಿತು. ಆದರೆ, ಸ್ಯಾಮ್ ಕರ್ರನ್ 63 ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಲಿವಿಂಗ್ಸ್ಟೋನ್ ಸಹ ಉತ್ತಮ ಸಾಥ್ ನೀಡಿದರು. ಸ್ಯಾಮ್ ಕರ್ರನ್ 63 ರನ್ (47 ಎಸೆತ, 6 ಬೌಂಡರಿ, 1 ಸಿಕ್ಸರ್), ಲಿವಿಂಗ್ಸ್ಟೋನ್ 38 ರನ್, ಶಿಖರ್ ಧವನ್ 22 ರನ್, ಜಾನಿ ಬೈರ್ಸ್ಟೋವ್ 9 ರನ್, ಪ್ರಭ್ಸಿಮ್ರನ್ ಸಿಂಗ್ 26 ರನ್, ಜಿತೇಶ್ ಶರ್ಮಾ 9 ರನ್, ಹರ್ಪ್ರೀರ್ ಬ್ರಾರ್ 2 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಡೆಲ್ಲಿ ಪರ ಖಲೀಲ್ ಅಹ್ಮದ್, ಕುಲ್ದೀಪ್ ಯಾದವ್ 2 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದು ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಸ್ಫೋಟಕ ಆರಂಭ ಪಡೆಯಿತು. ಆದರೆ, ನಂತರ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. 19 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಡೆಲ್ಲಿ ತಂಡ 160 ರನ್ ತಲುಪುವುದೂ ಕಷ್ಟವಾದಗಾ ಪವಾಡ ಎಂಬಂತೆ ಅಭಿಷೇಕ್ ಪೋರೆಲ್ ಒಂದೇ ಓವರ್ನಲ್ಲಿ 25 ರನ್ ಚಚ್ಚಿ ತಂಡದ ಮೊತ್ತ ಏರಿಸಿದರು. ಪರಿಣಾಮ 174 ರನ್ ಗಳಿಸಿತು. ರಿಷಭ್ ಪಂತ್ 14 ತಿಂಗಳ ನಂತರ ಮತ್ತೆ ಕ್ರೀಸ್ ಗಿಳಿದು ಬ್ಯಾಟಿಂಗ್ ಮಾಡಿದರು. ಅಭಿಮಾನಿಗಳು ಅವರು ಕ್ರೀಡಾಂಗಣಕ್ಕೆ ಬರುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಡೇವಿಡ್ ವಾರ್ನರ್ 29 ರನ್, ಮಿಚೆಲ್ ಮಾರ್ಷ್ 20 ರನ್, ಶಾಯಿ ಹೋಪ್ 33 ರನ್, ರಿಷಭ್ ಪಂತ್ 18 ರನ್, ರಿಕಿ ಭುಯಿ 3 ರನ್, ಟ್ರಿಸ್ಟಾನ್ ಸ್ಟಬ್ಸ್ 5 ರನ್, ಅಕ್ಷರ್ ಪಟೇಲ್ 21 ರನ್, ಸುಮಿತ್ ಕುಮಾರ್ 2 ರನ್, ಕುಲ್ದೀಪ್ 1 ರನ್ ಗಳಿಸಿದ್ರೆ, ಅಭಿಷೇಕ್ 10 ಎಸೆತಗಳಲ್ಲಿ 32 ರನ್ ಗಳಿಸಿ ಆಸರೆಯಾದರು. ಪಂಜಾಬ್ ಪರ ಅರ್ಷ್ದೀಪ್ ಸಿಂಗ್, ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಿತ್ತರೆ, ಕಗಿಸೋ ರಬಾಡ, ಹರ್ಪ್ರೀತ್ ಬ್ರಾರ್, ರಾಹುಲ್ ಚಹಾರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.