ಒಂದು ಕಾಲದಲ್ಲಿ ಹಿಂದುತ್ವದ ಮತ್ತು ಸಂಘ ಪರಿವಾರದ ಕಟ್ಟಾಳು, ಬಿಜೆಪಿಯ ಸಕ್ರಿಯ ನಾಯಕರಾಗಿದ್ದ ಅಶೋಕ್ ಕುಮಾರ್ ರೈ ಇಂದು ಪುತ್ತೂರಿನ ಕಾಂಗ್ರೆಸ್ ಶಾಸಕ. ಪಕ್ಷ ಬದಲಾದರೂ, ಅವರ ಮೇಲಿನ ಜನರ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ, ‘ಪಕ್ಷಾತೀತ ನಾಯಕ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ಬಿಜೆಪಿಯ ತಳಪಾಯದಲ್ಲೇ ಬೆಳೆದಿದ್ದ ಅವರು ಕಾಂಗ್ರೆಸ್ ಸೇರಿದ್ದು ಯಾಕೆ? ಈ ಪ್ರಶ್ನೆಗೆ ಇದೀಗ ಸ್ವತಃ ಅಶೋಕ್ ರೈ ಅವರೇ ಉತ್ತರ ನೀಡಿದ್ದು, ಬಿಜೆಪಿಯ ಆಂತರಿಕ ರಾಜಕೀಯದ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ.
ಬಿಜೆಪಿಯಲ್ಲಿದ್ದಾಗ ನಡೆದಿದ್ದೇನು?
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ‘ನಾನು ಮತ್ತು ಅರುಣ್ ಕುಮಾರ್ ಪುತ್ತಿಲ ಇಬ್ಬರೂ ಬಿಜೆಪಿಯಲ್ಲಿದ್ದೆವು. ಆದರೆ ಪಕ್ಷದಲ್ಲಿದ್ದ ಕೆಲವರು ತಮ್ಮ ಸ್ವಂತ ಉನ್ನತಿಗಾಗಿ ನಮ್ಮಿಬ್ಬರನ್ನೂ ತುಳಿಯುವ ಕೆಲಸ ಮಾಡಿದರು’ ಎಂದು ಸ್ಫೋಟಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಸ್ಥಳೀಯವಾಗಿ ಯಾವುದೇ ಧಾರ್ಮಿಕ, ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದ ತಮ್ಮ ಬೆಳವಣಿಗೆಯನ್ನು ಸಹಿಸದ ಪಕ್ಷದೊಳಗಿನ ಕೆಲವರೇ ತಮ್ಮ ನಿರ್ಗಮನಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ತುಳಿದಿದ್ದೇ ಅವರಿಗೆ ಮುಳುವಾಯಿತು’
“ನಮ್ಮನ್ನು ತುಳಿದಿದ್ದರಿಂದ ಅವರಿಗೆ ತೊಂದರೆಯಾಯಿತೇ ಹೊರತು ನಮಗೇನೂ ಆಗಲಿಲ್ಲ. ನಾನು ಕಾಂಗ್ರೆಸ್ ಪಕ್ಷದಿಂದ ಶಾಸಕನಾದೆ, ಅರುಣ್ ಕುಮಾರ್ ಪುತ್ತಿಲ ತಮ್ಮದೇ ಆದ ಸಂಘಟನೆ ಕಟ್ಟಿಕೊಂಡು ಸಮಾಜದಲ್ಲಿ ಸಕ್ರಿಯರಾಗಿದ್ದಾರೆ’ ಎಂದು ಅಶೋಕ್ ರೈ ವಿವರಿಸಿದ್ದಾರೆ. ಅವರ ಈ ಮಾತು, ಪುತ್ತೂರಿನಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲಿಗೆ ಹಿಡಿದ ಕೈಗನ್ನಡಿಯಾಗಿದೆ.
ಕಾರ್ಯಕರ್ತರ ಮಾತಿಗೆ ಬೆಲೆ ಕೊಡದ ಬಿಜೆಪಿ
ಅಶೋಕ್ ರೈ ಅವರ ಈ ಮಾತು ಕೇವಲ ಆರೋಪವಲ್ಲ, ಇದು ಪುತ್ತೂರಿನ ಸದ್ಯದ ರಾಜಕೀಯ ವಾಸ್ತವ ಎಂಬುದಕ್ಕೆ ಸ್ಥಳೀಯರ ಮಾತುಗಳೇ ಸಾಕ್ಷಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಮತ್ತು ಬೆಂಬಲಿಗರು ಪಟ್ಟು ಹಿಡಿದರೂ, ಬಿಜೆಪಿ ನಾಯಕತ್ವ ಅದನ್ನು ಕಡೆಗಣಿಸಿತ್ತು. ತಮ್ಮ ಹಠಮಾರಿ ಧೋರಣೆಯಿಂದಾಗಿ ಬಿಜೆಪಿ ಅಭ್ಯರ್ಥಿ ಸೋಲನುಭವಿಸಿದರು. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿದರೆ ಏನಾಗುತ್ತದೆ ಎಂಬುದಕ್ಕೆ ಪುತ್ತೂರು ಚುನಾವಣೆಯೇ ಸ್ಪಷ್ಟ ಉದಾಹರಣೆ.
ಕೈತಪ್ಪುತ್ತಿರುವ ಪುತ್ತೂರು ಕೋಟೆ
ಈಗಲೂ ಬಿಜೆಪಿ ತನ್ನ ತಪ್ಪಿನಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ, ಒಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆಯಾಗಿದ್ದ ಪುತ್ತೂರು, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕೈತಪ್ಪಿ ಹೋಗುವುದು ನಿಶ್ಚಿತ’ ಎಂಬ ಮಾತುಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಪಕ್ಷದೊಳಗಿನ ಆಂತರಿಕ ಕಿತ್ತಾಟದಿಂದ ಬೇಸತ್ತು ಹೊರಬಂದ ಅಶೋಕ್ ರೈ, ಇಂದು ಪಕ್ಷಾತೀತವಾಗಿ ಜನರ ಮನ್ನಣೆ ಗಳಿಸಿದ್ದಾರೆ. ತಮ್ಮ ಕೆಲಸ ಮತ್ತು ಜನಸ್ನೇಹಿ ವ್ಯಕ್ತಿತ್ವದಿಂದಲೇ ಅವರು ಇಂದು ಪುತ್ತೂರಿನಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.








