ಕಾಂಗ್ರೆಸ್ congress ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ : ಆರ್.ಅಶೋಕ್
ಬೆಂಗಳೂರು : ನಮ್ಮಲ್ಲಿ ಒಬ್ಬರೇ ನಾಯಕರು. ಕಾಂಗ್ರೆಸ್ ನಲ್ಲಿ ಒಂದೇ ಮನೆ ನಾಲ್ಕು ಬಾಗಿಲು ಆಗಿದೆ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ, ಆದರೆ ಅವರು ನಮ್ಮಲ್ಲಿ ಬಿದ್ದಿರುವ ನೊಣ ನೋಡೋದಕ್ಕೆ ಬಂದಿದ್ದಾರೆ ಎಂದು ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನವರು ಮೊದಲು ನಿಮ್ಮ ತಟ್ಟೆ ಶುದ್ದಿ ಮಾಡಿ, ಗಂಜಲ ಹಾಕ್ತಿರೋ ಇನ್ನೇನು ಹಾಕಿ ಕ್ಲೀನ್ ಮಾಡ್ತೀರೋ ನೋಡಿಕೊಳ್ಳಿ. ಆಮೇಲೆ ಬೇರೆಯವರನ್ನು ಟೀಕೆ ಮಾಡುವುದನ್ನು ಕಲಿಯಿರಿ ಎಂದು ಟೀಕಿಸಿದರು.
ದಲಿತರು ಸಿಎಂ ಆಗಬೇಕು ಅಂತ ಒಂದು ಬಾಗಿಲು, ಒಕ್ಕಲಿಗರು ಆಗಬೇಕು ಅಂತ ಇನ್ನೊಂದು ಬಾಗಿಲು, ಹಿಂದುಳಿದ ವರ್ಗ ಆಗಬೇಕು ಅಂತ ಮತ್ತೊಂದು ಬಾಗಿಲು, ಲಿಂಗಾಯತರು ಸಿಎಂ ಆಗಬೇಕು ಅಂತ ಮಗದೊಂದು ಬಾಗಿಲು. ನಿಮ್ಮ ಮನೆಯಲ್ಲಿ ಕಾಣಿಸಿಕೊಂಡಿರುವ ಬಿಲಗಳನ್ನು ಮೊದಲು ಮುಚ್ಚಿ ಎಂದು ತಿರುಗೇಟು ನೀಡಿದರು.