ರಾಜ್ಯ ರಾಜಕೀಯದಲ್ಲಿ ಮತ್ತೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಇದನ್ನು ಆಧಾರವಾಗಿಸಿಕೊಂಡು ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಶಡ್ಯಂತ್ರ ನಡೆಯುತ್ತಿದೆ ಎಂಬ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಮಾತಿನ ಸಮರ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಭೋವಿ ಅಭಿವೃದ್ಧಿ ನಿಗಮ ಸಂಬಂಧಿಸಿದ ಗಂಭೀರ ಆರೋಪ ಬೆಳಕಿಗೆ ಬಂದಿದೆ. ನಿಗಮದ ಅಧ್ಯಕ್ಷರು ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವ ಸಂದರ್ಭ ಕಮಿಷನ್ ಕೇಳುತ್ತಿದ್ದಾರೆ ಎಂಬ ವಿಷಯ ಹೊರಬಿದ್ದಿದೆ.
ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಮುಖ ಇನ್ನೊಮ್ಮೆ ಬಯಲಾಗಿದ್ದು, ಫಲಾನುಭವಿಗಳಿಗೆ ಸಿಗಬೇಕಾದ ಹಕ್ಕಿನ ಹಣಕ್ಕೂ ಕಮಿಷನ್ ಬೇಡುವ ಮಟ್ಟಕ್ಕೆ ಭ್ರಷ್ಟಾಚಾರ ತಲುಪಿದೆ ಎಂದು ಗರಂ ಆಗಿದ್ದಾರೆ.
ಸರ್ಕಾರವು ತನ್ನನ್ನು ‘ಸಾಮಾಜಿಕ ನ್ಯಾಯದ ಹೋರಾಟಗಾರ’ ಎಂದು ಹೇಳಿಕೊಂಡರೂ, ವಾಸ್ತವದಲ್ಲಿ ದಲಿತರ ಹಕ್ಕು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ವಿಪಕ್ಷ ನಾಯಕರು, ಇಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ತಕ್ಷಣ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಭ್ರಷ್ಟಾಚಾರ ಆರೋಪ ಸಾಬೀತಾದಲ್ಲಿ ನಿಗಮದ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ವಿವಾದ ಈಗಾಗಲೇ ರಾಜಕೀಯ ತಾಪಮಾನ ಹೆಚ್ಚಿಸಿರುವ ವೇಳೆ, ಭೋವಿ ಅಭಿವೃದ್ಧಿ ನಿಗಮದ ಕಮಿಷನ್ ಆರೋಪ ಮತ್ತಷ್ಟು ಬೆಂಕಿಗೆ ಎಣ್ಣೆ ಸುರಿದಂತಾಗಿದೆ. ರಾಜ್ಯದ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮಾತಿನ ಸಮರ ತೀವ್ರಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿವೆ.
ಒಟ್ಟಿನಲ್ಲಿ, ವಿಪಕ್ಷ ನಾಯಕ ಆರ್. ಅಶೋಕ್ ಅವರ ವಾಗ್ದಾಳಿ ರಾಜ್ಯ ಸರ್ಕಾರದ ಮೇಲೆ ಹೊಸ ಒತ್ತಡ ಸೃಷ್ಟಿಸಿದ್ದು, ಈ ಪ್ರಕರಣದಲ್ಲಿ ಸರ್ಕಾರ ಯಾವ ರೀತಿಯ ಸ್ಪಷ್ಟನೆ ನೀಡುತ್ತದೆ ಎಂಬುದರತ್ತ ಎಲ್ಲರ ದೃಷ್ಟಿ ನೆಟ್ಟಿದೆ.








