1971ರಲ್ಲಿ ವರನಟ ಡಾ. ರಾಜ್ ಕುಮಾರ್ ಅವರು ಅಭಿನಯಿಸಿದ್ದ ಕಸ್ತೂರಿ ನಿವಾಸದ ಚಿತ್ರ ಚಂದನವನದಲ್ಲಿ ಅಭಿಮಾನಿಗಳಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಇದೀಗ ಬರೋಬ್ಬರಿ 5 ದಶಕದ ಬಳಿಕ ಈ ಎವರ್ ಗ್ರೀನ್ ಚಿತ್ರದ ಹೆಸರಲ್ಲೇ ಮತ್ತೊಂದು ಚಿತ್ರ ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ಸಜ್ಜಾಗ್ತಿದೆ. ಈ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿದ್ದಾರೆ.
ಇನ್ನೂ ಚಿತ್ರದ ಹೆಸರು ಹೇಳುತ್ತಿದ್ದಂತೆ ಥಟ್ ಅಂತ ಅಣ್ಣವ್ರ ಚಿತ್ರ ನೆನಪಾಗುತ್ತೆ. ಒಂದು ಕ್ಷಣ ಈ ಚಿತ್ರಕ್ಕೂ ಆ ಚಿತ್ರಕ್ಕೂ ಏನೋ ಸಂಬಂಧ ಇದೆಯೇನೋ ಅನ್ಸುತ್ತೆ. ಆದರೆ ಹಳೆಯ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ದಿನೇಶ್ ಬಾಬು ಅವರು ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಸಹ ಶುರುವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ನಿರ್ದೇಶಕ ದಿನೇಶ್ ಬಾಬು ಅವರು ಈಗಾಗಲೇ ಅಮೃತವರ್ಷಿಣಿ, ಲಾಲಿ, ನಿಶ್ಯಬ್ದ, ಪ್ರೇಮೋತ್ಸವ, ಹಾಲಿವುಡ್, ಅಭಿ, ಇನ್ಸ್ ಪೆಕ್ಟರ್ ವಿಕ್ರಂ ಅಂತಹ ಸೂಪರ್ ಹಿಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಆಗಿದ್ದಾರೆ. ಇದೀಗ ತಮ್ಮ 50ನೇ ಚಿತ್ರ ( ಕಸ್ತೂರಿ ನಿವಾಸ)ದ ತಯಾರಿಯಲ್ಲಿದ್ದಾರೆ.