Raichur – ಕಾಲೇಜಿಗೆ ತೆರಳಿದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ…
ರಾಯಚೂರು ನಗರದ ಬಾಲಕಿಯರ ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಕುರಿತು ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮೂವರು ವಿದ್ಯಾರ್ಥಿನಿಯರು ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿದ್ದರೆ ಒಬ್ಬರು ಮಾತ್ರ ಪ್ರಥಮ ಪಿಯುಸಿ ಓದುತ್ತಿದ್ದರು. ಶನಿವಾರ ಕಾಲೇಜಿಗೆ ತೆರಳೋದಾಗಿ ಹೊರಟ ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗಿಲ್ಲ.
ವಿದ್ಯಾರ್ಥಿನಿಯರ ನಾಪತ್ತೆ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಚಾರ್ಯ ಚಂದ್ರಶೇಖರ್, ವಿದ್ಯಾರ್ಥಿನಿಯರ ನಾಪತ್ತೆ ವಿಷಯವು ಜುಲೈ 23ರಂದು ಗೊತ್ತಾಯಿತು. ಕಾಲೇಜು ಕ್ಯಾಂಪಸ್ನ ಆಚೆ ಈ ವಿದ್ಯಮಾನ ನಡೆದಿದೆ. ಪೊಲೀಸರು ಕೇಳಿದ್ದರಿಂದ ಅವರಿಗೆ ಹಾಜರಾತಿ ಪುಸ್ತಕ ಮತ್ತು ಅಗತ್ಯ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದೇವೆ ಎಂದು ಪ್ರಾಚಾರ್ಯರು ಹೇಳಿದರು.
ನಾಪತ್ತೆಯಾದ ವಿದ್ಯಾರ್ಥಿನಿಯರನ್ನು ಹುಡುಕಲು ಯತ್ನಿಸಿದ ಪೋಷಕರು ತಮ್ಮ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಇಂದು ಕಾಲೇಜಿಗೆ DySP ವೆಂಕಟೇಶ್, ಪೊಲೀಸ್ ಇನ್ಸ್ಪೆಕ್ಟರ್ ಗುಂಡೂರಾವ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.








