ಬೆಂಗಳೂರು ಸೇರಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಮಳೆ ಶುರುವಾಗಿದೆ. ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ, ಮೆಜೆಸ್ಟಿಕ್, ವಿಧಾನಸೌಧ, ಜೆಪಿನಗರ, ರಿಚ್‌ಮಂಡ್ ವೃತ್ತ, ಟೌನ್‌ಹಾಲ್ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ.
ಮಳೆಯ ಮುನ್ಸೂಚನೆ:
ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಲಘು ಮಳೆಯಾಗಲಿದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗಲಿದೆ.
ಉತ್ತರ ಒಳನಾಡು ಮತ್ತು ಕರಾವಳಿ:
ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ತುಮಕೂರು, ವಿಜಯನಗರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ.
ಬೆಂಗಳೂರಿನ ಹವಾಮಾನ:
ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಜೋರು ಮಳೆಯಾಗಿದೆ. ಎಚ್‌ಎಎಲ್‌ನಲ್ಲಿ 25.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ನಗರದಲ್ಲಿ 25.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.








