ಐಪಿಎಲ್ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಕೆಕೆಆರ್ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ಐತಿಹಾಸಿಕ ದಾಖಲೆಯೊಂದಕ್ಕೆ ತಂಡ ಸಾಕ್ಷಿಯಾಗಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಹೀಗಾಗಿ ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಕೆಕೆಆರ್ ತಂಡ ಸುನೀಲ್ ನರೈನ್ ಅವರ ಶತಕದ ನೆರವಿನಿಂದ 223 ರನ್ ಗಳಿಸಿತ್ತು. ಸುನೀಲ್ ನರೈನ್ ಕೇವಲ 56 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 13 ಬೌಂಡರಿಗಳೊಂದಿಗೆ 109 ರನ್ ಗಳಿಸಿದ್ದರು. ಈ ಬೃಹತ್ 224 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವಿನ ದಡ ಸೇರಿತು.
ರಾಜಸ್ಥಾನ್ ಪರ ಜೋಸ್ ಬಟ್ಲರ್ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. 60 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಈ ಶತಕದ ಸಹಾಯದಿಂದ ರಾಜಸ್ಥಾನ್ ತಂಡ 20ನೇ ಓವರ್ನ ಕೊನೆಯ ಎಸೆತದಲ್ಲಿ ಗುರಿ ತಲುಪಿತು. ಈ ಗೆಲುವಿನ ಮೂಲಕ ಐಪಿಎಲ್ ಇತಿಹಾಸದಲ್ಲಿ ಬೃಹತ್ ಸ್ಕೋರ್ ಚೇಸ್ ಮಾಡಿ ಗೆದ್ದ ವಿಶೇಷ ದಾಖಲೆಯನ್ನು ರಾಜಸ್ಥಾನ್ ರಾಯಲ್ಸ್ ತಂಡ ಮರು ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ರಾಜಸ್ಥಾನ್ ರಾಯಲ್ಸ್ ಹೆಸರಿನಲ್ಲಿಯೇ ಇತ್ತು.
2020 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 224 ರನ್ನ ಚೇಸ್ ಮಾಡಿತ್ತು. ಈಗ ಕೆಕೆಆರ್ ವಿರುದ್ಧ 224 ರನ್ ಗಳ ಗುರಿ ಮುಟ್ಟಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳನ್ನು ಚೇಸ್ ಮಾಡಿದ ತಂಡ ಎಂಬ ದಾಖಲೆಗೆ ರಾಜಸ್ಥಾನ್ ಸಾಕ್ಷಿಯಾಗಿದೆ.