ಹೆಚ್ಚು ಕಡಿಮೆ ಒಂದು ವರ್ಷದ ನಂತರ ಸ್ಯಾಂಡಲ್ ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಗಳತ್ತ ಆಸಕ್ತಿ ತೋರಿದ್ದಾರೆ. ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ರಮ್ಯಾ ಅವರ ಟ್ವಿಟ್ಟರ್ ಖಾತೆ ಈಗ ಆಕ್ಟಿವ್ ಆಗಿದೆ. ಇದು ಸಹಜವಾಗಿಯೇ ರಮ್ಯಾ ಅಭಿಮಾನಿಗಳಿಗೆ ಖುಷಿ ನೀಡಿದೆ.
ಕಳೆದ ವರ್ಷ ಜೂನ್ ಒಂದರಂದು ಕೊನೆಯ ಟ್ವೀಟ್ ಮಾಡಿದ್ದ ರಮ್ಯಾ ಅವರ ಟ್ವಿಟ್ಟರ್ ಖಾತೆ ಹೈಡ್ ಆಗಿತ್ತು. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದ ರಮ್ಯಾ ಪ್ರಧಾನಿ ಮೋದಿ ಅವರನ್ನು ಟ್ವೀಟ್ ಗಳ ಮೂಲಕ ಟೀಕಿಸಿ ಸುದ್ದಿಯಾಗುತ್ತಿದ್ದರು.
ಆದ್ರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗುತ್ತಿದ್ದಂತೆ ಅವರು ಸಾಮಾಜಿಕ ಜಾಲತಾಣಗಳಿಂದ ದೂರವಾಗಿದ್ದರು. ಈಗ ಅವರ ಟ್ವಿಟ್ಟರ್ ಖಾತೆ ಆಕ್ಟಿವ್ ಆಗಿರುವುದರಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ.









