ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಕುಮಾರ ಎಂಬಾತ ದಿ ಕಲರ್ ಟೊಮ್ಯಾಟೊದಲ್ಲಿ ಅವಕಾಶ ಕೊಡುತ್ತೇನೆ ಎಂದು ಹೇಳಿ ಅತ್ಯಾಚಾರ ನಡೆಸಿದ್ದಲ್ಲದೇ, 75 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರ ದೂರು ಸಲ್ಲಿಸಿದ್ದಾರೆ.
ನಿರ್ಮಾಪಕ ಕುಮಾರು ಚಿತ್ರ ಹಿಟ್ ಆಗುತ್ತದೆ. ಆಗ 1.5 ಕೋಟಿ ರೂ. ಕೊಡುತ್ತೇನೆ. ಈಗ 75 ಲಕ್ಷ ರೂ. ನೀಡಿ ಎಂದು ಹೇಳಿದ್ದಾನೆ. ಚಿತ್ರದಲ್ಲಿ ಅವಕಾಶ ಸಿಗುತ್ತದೆ ಹಾಗೂ ಹಣ ಡಬಲ್ ಆಗುತ್ತದೆ ಎಂದು ನಂಬಿದ್ದ ಮಹಿಳೆ ಹಣ ನೀಡಿದ್ದರು. ಆದರೆ, ಇತ್ತ ಚಿತ್ರವೂ ನಿರ್ಮಾಣವಾಗಿಲ್ಲ. ಇನ್ನೊಂದೆಡೆ ಹಣವನ್ನು ಕೂಡ ಕುಮಾರ್ ಮರಳಿ ನೀಡಿಲ್ಲ. ಹೀಗಾಗಿ ಮಹಿಳೆ ಮರಳಿ ಹಣ ನೀಡುವಂತೆ ಕೇಳಲು ಆರಂಭಿಸಿದ್ದಾರೆ. ಕುಮಾರ್ ಸತಾಯಿಸುತ್ತ ತಲೆ ಮರೆಸಿಕೊಂಡು ತಿರುಗಾಡಿದ್ದಾನೆ.
ಮಹಿಳೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಾಗ, ಹಣ ನೀಡುತ್ತೇನೆ ಬಾ ಎಂದು ಕಚೇರಿಗೆ ಕರೆಯಿಸಿಕೊಂಡಿದ್ದಾನೆ. ಅಲ್ಲಿ ಅತ್ಯಾಚಾರ ನಡೆಸಿ, ಬಾಳು ಕೊಡುತ್ತೇನೆ ಎಂದು ಹೇಳಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.








