RCB ಹೊಸ ಕ್ಯಾಪ್ಟನ್ ಯಾರು..? RCB Captain 2022
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಯಾರು..? ಸದ್ಯ ಬೆಂಗಳೂರು ತಂಡದ ಅಭಿಮಾನಿಗಳಿಗೆ ಪದೇ ಪದೇ ಕಾಡುತ್ತಿರುವ ಪ್ರಶ್ನೆ. ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಎಂಬ ಪ್ರಶ್ನೆ ಹೇಗೆ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತೋ.. ಅದೇ ರೀತಿಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ನಾಯಕ ಯಾರು ಅನ್ನೋ ಪ್ರಶ್ನೆ ಕೂಡ ಕೋಟ್ಯಂತರ ಅಭಿಮಾನಿಗಳಲ್ಲಿ ಮನೆ ಮಾಡಿದೆ. RCB Captain 2022
ಯಾಕಂದರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದ ವಿರಾಟ್ ಕೊಹ್ಲಿ, ಎಲ್ಲವೂ ಅವರೇ ಎಂಬಂತೆ ಎಲ್ಲರಲ್ಲೂ ಒಬ್ಬರಾಗಿದ್ದರು. ಐಪಿಎಲ್ ಶುರುವಾದಾಗಿನಿಂದಲೂ ಆರ್ ಸಿಬಿಯಲ್ಲಿರುವ ವಿರಾಟ್, ತಂಡದ ಬ್ರ್ಯಾಂಡ್ ಹೆಚ್ಚಿಸುವಲ್ಲಿ ಹಾಗೇ ತಂಡಕ್ಕೆ ಈ ಮಟ್ಟಿಗೆ ಕ್ರೇಜ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆರ್ ಸಿಬಿ ಅಂದ್ರೆ ವಿರಾಟ್, ವಿರಾಟ್ ಕೊಹ್ಲಿ ಅಂದ್ರೆ ಆರ್ ಸಿಬಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ವಿರಾಟ್ ಕೊಹ್ಲಿ ನಾಯಕರಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲಿಲ್ಲ. ಆದ್ರೂ ಆರ್ ಸಿಬಿಯನ್ಸ್ ವಿರಾಟ್ ಕೊಹ್ಲಿ ಅವರನ್ನು ಬಿಟ್ಟುಕೊಡಲು ತಯಾರಿಲ್ಲ.
ಇನ್ನು ಕಳೆದ ವರ್ಷ ವಿರಾಟ್, ತಮ್ಮ ಕ್ಯಾಪ್ಟನ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇನ್ಮುಂದೆ ಆರ್ ಸಿಬಿಯ ನಾಯಕರಾಗಿರುವುದಿಲ್ಲ ಎಂದು ಘೋಷಣೆ ಮಾಡಿಬಿಟ್ಟರು. ಇದು ಆರ್ ಸಿಬಿ ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಮಧ್ಯೆ ವಿರಾಟ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಆರಂಭದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಆರ್ ಸಿಬಿಯ ನಾಯಕರಾಗುತ್ತಾರೆ ಅನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ ಅವರು ಲಕ್ನೋ ಪಾಲಾದರು. ಇದಲ್ಲದೇ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾದ ಸ್ಟಾರ್ ದೇವಿಡ್ ವಾರ್ನರ್ ಹೆಸರು ಕೇಳಿಬರುತ್ತಿದೆ. ಇದರ ಜೊತೆಗೆ ಆರ್ ಸಿಬಿ ತಂಡದಲ್ಲಿರುವ ಮ್ಯಾಕ್ಸ್ ವೆಲ್ ಅವರೇ ತಂಡದ ನಾಯಕರಾಗುತ್ತಾರೆ ಅನ್ನುವ ಮಾತುಗಳು ಕೂಡ ಹರಿದಾಡುತ್ತಿವೆ.
ಈ ಮೂರು ಹೆಸರುಗಳ ಪೈಕಿ, ಶ್ರೇಯಸ್ ಅಯ್ಯರ್ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಮುಂಬೈ ಇಂಡಿಯನ್ಸ್ ಪ್ಲಾನ್ ಮಾಡಿಕೊಂಡಿದೆಯಂತೆ. ರೋಹಿತ್ ಶರ್ಮಾ ಬಳಿಕ ಶ್ರೇಯಸ್ ಗೆ ನಾಯಕನ ಪಟ್ಟಕಟ್ಟುವ ಉದ್ದೇಶ ಹೊಂದಿದೆಯಂತೆ. ಇತ್ತ ದೇವಿಡ್ ವಾರ್ನರ್ ವಿಚಾರಕ್ಕೆ ಬಂದ್ರೆ, ಐಪಿಎಲ್ ನಲ್ಲಿ ವಾರ್ನರ್ ನಾಯಕರಾಗಿ ಯಶಸ್ಸುಕಂಡಿದ್ದಾರೆ. ಹೀಗಾಗಿ ಅವರಿಗೆ ಮಣೆ ಹಾಕಲು ಕೆಕೆಆರ್ ಮತ್ತು ಪಂಜಾಬ್ ತಂದ ಕಾಯುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಮ್ಯಾಕ್ಸ್ ವೆಲ್ ವಿಚಾರಕ್ಕೆ ಬಂದರೇ ಮ್ಯಾಕ್ಸಿ ಐಪಿಎಲ್ ನಲ್ಲಿ ಮುಕ್ತವಾಗಿ ಆಡಲು ಇಷ್ಟಪಡುತ್ತಾರೆ. ಅವರ ಮೇಲೆ ನಾಯಕತ್ವದ ಜವಾಬ್ದಾರಿ ಹಾಕಿದ್ರೆ, ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ.
ಒಟ್ಟಾರೆ ಆರ್ ಸಿಬಿಯ ಮುಂದಿನ ನಾಯಕ ಯಾರು ಅನ್ನೋದು ಸದ್ಯ ಮಿಲಿಯನ್ ಡಾಲರ್ ಗಳ ಪ್ರಶ್ನೆಯಾಗಿದ್ದು, ಇದಕ್ಕೆ ಫ್ರಾಂಚೈಸಿಯೇ ಉತ್ತರ ಕೊಡಬೇಕಿದೆ.