ಮಹಿಳಾ ಪ್ರೀಮಿಯರ್ ಲೀಗ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವುದರ ಮೂಲಕ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿದೆ.
ಟೂರ್ನಿಯ ಎರಡನೇ ಸೀಸನ್‌ನ ಅಂತಿಮ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಡೆಲ್ಲಿ ನೇರವಾಗಿ ಫೈನಲ್ ಪ್ರವೇಶ ಮಾಡಿತ್ತು. ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದರು. ಆದರೆ, ತಂಡಕ್ಕೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ತಂಡದ ಮೊತ್ತ 20 ರನ್ಗಳಿದ್ದಾಗ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ರೂಪದಲ್ಲಿ ಮೊದಲ ವಿಕೆಟ್ ಹೋಯಿತು. ನಾಯಕಿ ಸ್ಮೃತಿ ಮಂಧಾನ ಕೂಡ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಂಧಾನ ಔಟಾದ ನಂತರ ಬಂದ ದಿಶಾ ಕ್ಯಾಸಟ್ ಖಾತೆ ತೆರೆಯಲು ಸಾಧ್ಯವಾಗದೆ ಔಟ್ ಆದರು. ಹೀಗಾಗಿ ಸ್ಕೋರ್ 23 ರನ್‌ಗಳಿಗೆ 4 ವಿಕೆಟ್ ಆಗಿತ್ತು.
ರಿಚಾ ಘೋಷ್ ಕೂಡ ಹೇಯ್ಲಿ ಮ್ಯಾಥ್ಯೂಸ್ ಎಸೆತದಲ್ಲಿ 19 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ರಿಚಾ ಔಟಾದ ನಂತರ, ಆರ್‌ಸಿಬಿ ನಿಯಮಿತ ಅಂತರದಲ್ಲಿ ತನ್ನ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಮತ್ತೊಂದು ತುದಿಯಲ್ಲಿ ಸಮಯೋಜಿತ ಬ್ಯಾಟಿಂಗ್ ನಡೆಸಿದ ಎಲಿಸ್ ಪೆರ್ರಿ 50 ಎಸೆತಗಳಲ್ಲಿ 66 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಕಟ್ಟುವಲ್ಲಿ ಸಹಕಾರಿಯಾದರು. ಇವರಿಂದಾಗಿ ಬೆಂಗಳೂರು ತಂಡ 20 ಓವರ್‌ಗಳಲ್ಲಿ 135 ರನ್ ಗಳಿಸಿತು. ಕಡಿಮೆ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. 27 ರನ್‌ಗಳಾಗುವಷ್ಟರಲ್ಲಿ ತಂಡವು ಇನ್‌ಫಾರ್ಮ್ ಬ್ಯಾಟರ್ ಹೇಲಿ ಮ್ಯಾಥ್ಯೂಸ್ ಅವರ ಪ್ರಮುಖ ವಿಕೆಟ್ ಕಳೆದುಕೊಂಡಿತು. ಹೇಲಿ ಮ್ಯಾಥ್ಯೂಸ್ 14 ಎಸೆತಗಳಲ್ಲಿ 15 ರನ್‌ಗಳ ಇನಿಂಗ್ಸ್ ಆಡಿದರು. ಸ್ಕೋರ್ 50 ರ ಸಮೀಪದಲ್ಲಿದ್ದಾಗ ಎರಡನೇ ಆರಂಭಿಕ ಬ್ಯಾಟರ್ ಯಾಸ್ತಿಕಾ ಭಾಟಿಯಾ ಪೆವಿಲಿಯನ್ ಸೇರಿದರು.
ಭಾಟಿಯಾ 27 ಎಸೆತಗಳಲ್ಲಿ 19 ರನ್ ಗಳಿಸಿದರು. ಹರ್ಮನ್‌ಪ್ರೀತ್ ಕೌರ್ 30 ಎಸೆತಗಳಲ್ಲಿ 33 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಕನ್ನಡತಿ ಶ್ರೇಯಾಂಕ ಮಾಡಿದ 18ನೇ ಓವರ್ನಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆನಂತರ ಮುಂಬೈ ತಂಡದ ಇನ್ನಿಂಗ್ಸ್ ಆಮೆಗತಿಯಲ್ಲಿ ಸಾಗಿತು. ಹೀಗಾಗಿ ತಂಡ 12 ಎಸೆತಗಳಲ್ಲಿ 15 ರನ್ ಕಲೆಹಾಕಲು ಸಾಧ್ಯವಾಗದೆ 5 ರನ್ಗಳಿಂದ ಪಂದ್ಯವನ್ನು ಸೋತಿತು. ಈ ಮೂಲಕ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತು.