ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ವುಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವನ್ನೇ ಸ್ವಾಗತಿಸಲಾಯಿತು. ಟ್ರೋಫಿಯೊಂದಿಗೆ ಆಗಮಿಸಿದ್ದ ಸ್ಮತಿ ಮಂಧಾನ ಪಡೆಯನ್ನು ಆರ್ಸಿಬಿ ಪುರುಷರ ತಂಡ ಗಾರ್ಡ್ ಆಫ್ ಹಾನರ್ನೊಂದಿಗೆ ಸ್ವಾಗತಿಸಿತು.
ಆಟಗಾರರು ಮತ್ತು ಸಿಬ್ಬಂದಿಗಳು ಎರಡೂ ಬದಿಗಳಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾ ಚಾಂಪಿಯನ್ಸ್ ತಂಡವನ್ನು ಮೈದಾನಕ್ಕೆ ಬರ ಮಾಡಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್ಸಿಬಿ ತಂಡವು ಮಹಿಳಾ ತಂಡಕ್ಕೆ ನೀಡಿದ ಗೌರವಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
2008 ರಲ್ಲಿ ಅಂಗಳಕ್ಕಿಳಿದ ಆರ್ಸಿಬಿ 17 ಸೀಸನ್ಗಳಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 16 ಸೀಸನ್ ಆಡಿದ್ರೆ, ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 1 ಸೀಸನ್ ಆಡಿತ್ತು. ಆದರೆ ಈ ಹದಿನೇಳು ಸೀಸನ್ಗಳಲ್ಲಿ ಒಮ್ಮೆಯೂ ಟ್ರೋಫಿ ಗೆದ್ದಿರಲಿಲ್ಲ.
ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಮಹಿಳಾ ತಂಡ ಚೊಚ್ಚಲ ಬಾರಿ ಚಾಂಪಿಯನ್ ಆಗಿದೆ. ಇದಕ್ಕೂ ಮೊದಲು ಆರ್ಸಿಬಿ ಪುರುಷರ ತಂಡವು ಐಪಿಎಲ್ 2009, 2011, 2016 ರಲ್ಲಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ, ಮಹಿಳಾ ತಂಡ ತಾನಾಡಿದ ಎರಡನೇ ಸೀಸನ್ ನಲ್ಲಿಯೇ ಪ್ರಶಸ್ತಿ ಗೆದ್ದಿದೆ. ಮೊದಲ ಸೀಸನ್ ನಲ್ಲಿ ಹೀನಾಯವಾಗಿ ಸೋತಿದ್ದ ತಂಡ, ಎರಡನೇ ಸೀಸನ್ ನಲ್ಲಿ ಸಂಘಟಿತ ಹೋರಾಟದಿಂದ ಪ್ರಶಸ್ತಿ ಗೆದ್ದಿದೆ.