ಐಪಿಎಲ್ 2020ಗೆ ಈಗಾಗಲೇ ತಯಾರಿ ಶುರುವಾಗಿದ್ದು, ಟ್ರೋಫಿ ಮೇಲೆ ಎಲ್ಲಾ ತಂಡಗಳು ಕಣ್ಣಿಟ್ಟಿವೆ. ಕಳೆದ 12 ಸೀಸನ್ ಗಳಲ್ಲಿ ಒಂದು ಬಾರಿಯೂ ಕಪ್ ಗೆ ಮುತ್ತಿಡದ ಆರ್ ಸಿಬಿ ಈ ಬಾರಿ ಹೊಸ ಹುರುಪು ಹಾಗೂ ನೂತನ ಆಕರ್ಷಣೆಯೊಂದಿಗೆ ಅಖಾಡಕ್ಕಿಳಿಯಲಿದೆ.
ಆರ್ ಸಿಬಿ ಹೆಸರು, ಲೋಗೋ ಬದಲಾವಣೆ..?
ಮೂಲಗಳ ಪ್ರಕಾರ 2020ರ ಈ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಹೆಸರು ಹಾಗೂ ಲೋಗೋವನ್ನು ಬದಲಾಯಿಸಿಕೊಂಡು, ಫೀಲ್ಡ್ ಗೆ ಇಳಿಯಲಿದೆಯಂತೆ. ಈ ಬಗ್ಗೆ ತಂಡದ ಮುಖ್ಯಸ್ಥರು ಯಾವುದೇ ಮಾಹಿತಿ ನೀಡದೇ ಇದ್ರೂ, ಆರ್ ಸಿಬಿಯ ಟ್ವಿಟ್ಟರ್ , ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂನಲ್ಲಿನ ಕವರ್ ಪೇಜ್ ಫೋಟೊಗಳನ್ನ ತೆಗೆದು ಹಾಕಿರುವುದು ಈ ಸುದ್ದಿಗೆ ರೆಕ್ಕೆಪುಕ್ಕ ನೀಡುತ್ತಿದೆ. ಇನ್ಸ್ಟಾಗ್ರಾಮ್, ಟ್ವಿಟ್ಟರ್ ಗಳಲ್ಲಿ ಜನರೊಂದಿಗೆ ಸದಾ ಸಂಪರ್ಕ ಸಾಧಿಸುವ ಆರ್ ಸಿಬಿಯ ಎಲ್ಲಾ ಪೇಜ್ ಗಳ ಪ್ರೊಫೈಲ್ ಫೋಟೊಗಳನ್ನು ತೆಗೆದು ಹಾಕಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ವಿರಾಟ್, ಎಬಿಡಿ ಏನ್ ಹೇಳಿದ್ರು..?
ಆರ್ ಸಿಬಿ ತಂಡದಲ್ಲಿ ಇಷ್ಟೆಲ್ಲ ಬೆಳವಣಿಗೆ ಹಾಗೂ ಬದಲಾವಣೆ ನಡಿತಿದ್ರೂ, ಇದು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಗೊತ್ತೇ ಇಲ್ವಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲಾ ಪೋಸ್ಟ್ ಗಳು ಕಣ್ಮರೆಯಾಗಿದೆ. ಆದರೆ ತಂಡದ ನಾಯಕನಿಗೆ ಮಾಹಿತಿ ಇಲ್ಲ. ನಿಮಗೆ ಏನಾದರೂ ಸಹಾಯ ಬೇಕಾದರೆ ನಮಗೆ ತಿಳಿಸಿ ಎಂದು ಕೊಹ್ಲಿ ಹೇಳಿದ್ದಾರೆ.
ಸ್ಪೋಟಕ ಆಟಗರಾ ಎಬಿ ಡಿವಿಲಿಯರ್ಸ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ನಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಗೆ ಏನಾಗಿದೆ? ಇದು ಸಣ್ಣ ಬ್ರೇಕ್ ಎಂದು ನಂಬಿದ್ದೇನೆ ಎಂದು ತಮ್ಮ ಕಾಳಜಿ ಪ್ರದರ್ಶಿಸಿದ್ದಾರೆ.