ನವದೆಹಲಿ: ಒಮ್ಮೆಯೂ ಟ್ರೋಫಿ ಎತ್ತಿಹಿಡಿಯದ ಆರ್‌ಸಿಬಿ ಪುರುಷರ ತಂಡಕ್ಕೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಮಾದರಿಯಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ ನ 2ನೇ ಆವೃತ್ತಿಯಲ್ಲೇ ಚಾಂಪಿಯನ್ ಆಗಿದೆ.
ಕಳೆದ 16 ಆವೃತ್ತಿಗಳಿಂದ ಪುರುಷರ ತಂಡವನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದ ಅಭಿಮಾನಿಗಳು ಮಹಿಳಾ ತಂಡದ ಗೆಲುವನ್ನು ಸಂಭ್ರಮಿಸಿದ್ದಾರೆ. ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸತತ 2ನೇ ಬಾರಿಯೂ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್‌ಗಲ್ಲಿ 113 ರನ್ ಗಳಿಗೆ ಆಲೌಟ್ ಆಯಿತು. 114 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 19.3 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು.
114 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಸಹ ನಿಧಾನಗತಿ ಬ್ಯಾಟಿಂಗ್ ಆರಂಭಸಿತು. ವಿಕೆಟ್ ತೆಗೆಯದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಫೀಲ್ಡಿಂಗ್ ನಡೆಸಿತು. ಇದರಿಂದ ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯುತ್ತಾಳೆ ಎಂಬ ಕುತೂಹಲ ಕೊನೆಯವರೆಗೂ ಇತ್ತು. ಆರ್‌ಸಿಬಿ ಪರ ಸ್ಮೃತಿ ಮಂದಾನ 31 ರನ್, ಸೋಫಿ ಡಿವೈನ್ 32 ರನ್, ಗಳಿಸಿದ್ರೆ, ಕೊನೇ ವರೆಗೂ ಹೋರಾಟ ನಡೆಸಿದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ 35 ರನ್, ರಿಚಾ ಘೋಷ್ 17 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ನಾಯಕಿ ಮೆಗ್ ಲ್ಯಾನ್, ಶಫಾಲಿ ವರ್ಮಾ ಸ್ಫೋಟಕ ಪ್ರದರ್ಶನ ತೋರಿದ್ದರು. ಪವರ್ ಪ್ಲೇನಲ್ಲಿ 6 ಓವರ್‌ಗಳಿಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 61 ರನ್ ಬಾರಿಸಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 200 ರನ್‌ಗಳ ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿತ್ತು. ಆನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ 49 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ನಂತರ ಆರ್‌ಸಿಬಿ, ನಂತರ ಡೆಲ್ಲಿ ಆಟಕ್ಕೆ ಬ್ರೇಕ್ ಹಾಕಿತು. 8ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಸೋಫಿ ಮೊಲಿನೆಕ್ಸ್ ಮೊದಲ 4 ಎಸೆತಗಳಲ್ಲೇ ಅಗ್ರ ಕ್ರಮಾಂಕದ 3 ವಿಕೆಟ್ (ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ಅಲಿಸ್ ಕ್ಯಾಪ್ಸಿ) ಉರುಳಿಸಿ, ಕೇವಲ 1 ರನ್ ನೀಡಿದರು. 7 ಓವರ್‌ಗಳಲ್ಲಿ 64 ರನ್ ಗಳಿಸಿದ್ದ ಡೆಲ್ಲಿ ತಂಡ 81 ರನ್ ಗಳಿಸುವ ವೇಳೆಗೆ ಕೇವಲ 17 ರನ್ ಗಳ ಅಂತರದಲ್ಲೇ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಡೆಲ್ಲಿ ತಂಡ ವಿಕೆಟ್‌ಗಳನ್ನು 113 ರನ್‌ಗಳಿಗೆ ಆಲೌಟ್ ಆಯಿತು.
ಶಫಾಲಿ ವರ್ಮಾ 27 ಎಸೆತಗಳಲ್ಲಿ 44 ರನ್ ಚಚ್ಚಿದರೆ (3 ಸಿಕ್ಸರ್, 2 ಬೌಂಡರಿ), ಮೆಗ್ ಲ್ಯಾನಿಂಗ್ 23 ರನ್, ರಾಧಾ ಯಾಧವ್ 12 ರನ್ ಗಳಿಸಿ ಪೆವಿಲಿಯನ್ ಸೇರಿದರು. ಜೆಮಿಮಾ ರೊಡ್ರಿಗ್ಸ್, ಅಲಿಸ್ ಕ್ಯಾಪ್ಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರೆ, ಜೆಸ್ ಜೊನಾಸೆನ್ 3 ರನ್, ಮಾರಿಜಾನ್ನೆ ಕಪ್ 8 ರನ್, ಮಿನ್ನು ಮಣಿ 5 ರನ್, ಅರುಂಧತಿ ರೆಡ್ಡಿ 10 ರನ್, ಶಿಖಾ ಪಾಂಡೆ 5 ರನ್ ಗಳಿಸಿದರು.