ಚೀನಾದಿಂದ ಹಬ್ಬಿದ ಕೊರೊನಾ ವೈರಸ್ ಸೋಂಕು ವಿಶ್ವದೆಲ್ಲೆಡೆ ಹರಡಿ ಮಾರಣಹೋಮ ಮುಂದುವರಿಸಿದೆ. ವಿಶ್ವದ ದೊಡಣ್ಣ ಎನಿಸಿಕೊಂಡ ಅಮೆರಿಕ ಕೊರೊನಾ ಸೋಂಕಿನಿಂದ ತಲ್ಲಣಗೊಂಡಿದ್ದು, ಚೀನಾದ ಮೇಲೆ ಕೆಂಡಾಮಂಡಲವಾಗಿದೆ. ಚೀನಾದಲ್ಲಿರುವ ಅಮೆರಿಕ ಮೂಲದ ಕಂಪೆನಿಗಳು ಚೀನಾದಿಂದ ಹೊರಹೋಗಲು ಸಿದ್ಧತೆ ನಡೆಸಿದ್ದು, ಭಾರತ ಆ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ನೀಡಿದೆ.
ಏಪ್ರಿಲ್ ನಲ್ಲಿ ಭಾರತ ಸರ್ಕಾರವು ಅಮೆರಿಕದ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದು, ಹಲವು ರಾಜ್ಯಗಳು ಈಗಾಗಲೇ ಅಮೆರಿಕ ಮೂಲದ ಕಂಪೆನಿಗಳನ್ನು ತಮ್ಮ ರಾಜ್ಯದೆಡೆ ಸೆಳೆಯಲು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.ಅಮೆರಿಕ ಕಂಪೆನಿಗಳು ಚೀನಾದಿಂದ ಹೊರಬಂದು ಭಾರತದಲ್ಲಿ ತಮ್ಮ ಕಾರ್ಯರಂಭ ಮಾಡಲು ಇಚ್ಛಿಸಿದರೆ, ಭಾರತ ವಿಶೇಷ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿದೆ ಎಂದು ವರದಿಗಳು ಹೇಳಿವೆ.
ಈಗಾಗಲೇ ವೈದ್ಯಕೀಯ ಉತ್ಪನ್ನಗಳ ತಯಾರಿಕಾ ಕಂಪನಿ ಆಬಾಟ್ ಲ್ಯಾಬೋರೆಟರಿ ಸೇರಿದಂತೆ ಒಂದು ಸಾವಿರ ಕಂಪನಿಗಳ ಜೊತೆ ಭಾರತ ಸರಕಾರ ಮಾತುಕತೆ ನಡೆಸಿದ್ದು, ಇದರಲ್ಲಿ ವಿಶೇಷವಾಗಿ 550 ಕಂಪೆನಿಗಳು ಭಾರತಕ್ಕೆ ಬರಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ವೈದ್ಯಕೀಯ ಉತ್ಪನ್ನಗಳ ಪೂರೈಕೆದಾರರು, ಆಹಾರ ಉತ್ಪನ್ನ ಘಟಕಗಳು, ಟೆಕ್ಸ್ ಟೈಲ್, ಲೇಥರ್ ಮತ್ತು ಆಟೋಮೊಬೈಲ್ಸ್ ಬಿಡಿಭಾಗಗಳ ತಯಾರಕರು ಇತ್ಯಾದಿ ಕಂಪನಿಗಳ ಮೇಲೆ ಭಾರತ ತನ್ನ ದೃಷ್ಟಿಯನ್ನು ನೆಟ್ಟಿದೆ ಎಂದು ಹೇಳಲಾಗುತ್ತಿದೆ. ಕೊರೋನಾ ಸೋಂಕಿನ ಗಂಭೀರತೆಯನ್ನು ಜಗತ್ತಿಗೆ ಮುಚ್ಚಿಟ್ಟು, ಇಂದಿನ ಸಂದಿಗ್ಧ ಪರಿಸ್ಥಿತಿಗೆ ಕಾರಣವಾಗಿರುವ ಚೀನಾದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗರಂ ಆಗಿದ್ದು, ಈಗಾಗಲೇ ಅಮೆರಿಕ ಮತ್ತು ಚೀನಾದ ನಡುವೆ ಒಂದು ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ.ಅಲ್ಲದೆ ಅಮೆರಿಕ ತನ್ನ ಕಂಪೆನಿಗಳಿಗೆ ಚೀನಾದಿಂದ ಹೊರಬಂದು ಬೇರೆ ದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸುವಂತೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ.








