ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಡೆದ ಪ್ರತಿಭಟನೆ ವೇಳೆ ದಾಂಧಲೆ ನಡೆಸಿದ್ದ ಅವರ ಬೆಂಬಲಿಗರ ವಿರುದ್ಧ ದಾಖಲಾಗಿದ್ದ 62 ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಪೊಲೀಸ್ ಇಲಾಖೆ ಮತ್ತು ಕಾನೂನು ಇಲಾಖೆಗಳಿಂದ ವಿರೋಧವಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಈ ನಿರ್ಧಾರ ಕೈಗೊಂಡಿದೆ.
2019ರಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದಾಗ, ಅವರ ಬೆಂಬಲಿಗರು ರಾಮನಗರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಾತನೂರು, ಕೋಡಿಹಳ್ಳಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ರೈತ ಮುಖಂಡರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಸರ್ಕಾರದ ನಿರ್ಧಾರಕ್ಕೆ ವಿರೋಧ:
ಸಂಪುಟ ಸಭೆಯ ನಿರ್ಧಾರಕ್ಕೆ ಪೊಲೀಸ್ ಮತ್ತು ಕಾನೂನು ಇಲಾಖೆಗಳು ವಿರೋಧ ವ್ಯಕ್ತಪಡಿಸಿದ್ದವು. ಡಿಜಿಪಿ ಮತ್ತು ಐಜಿಪಿ ಅವರು, ಈ ಪ್ರಕರಣಗಳು ವಾಪಸ್ ಪಡೆಯಲು ಅರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಹಾಗೆಯೇ, ಕಾನೂನು ಇಲಾಖೆಯು ಸಹ “ಸಾರ್ವಜನಿಕ ಹಿತಾಸಕ್ತಿ ಇಲ್ಲ, ಕೇಸ್ ಹಿಂದಕ್ಕೆ ಪಡೆಯಲು ಸೂಕ್ತವಲ್ಲ” ಎಂದು ಅಭಿಪ್ರಾಯ ನೀಡಿತ್ತು. ಆದರೂ, ಈ ಎರಡೂ ಇಲಾಖೆಗಳ ಅಭಿಪ್ರಾಯಗಳನ್ನು ಕಡೆಗಣಿಸಿ ಸರ್ಕಾರ ತನ್ನ ನಿರ್ಧಾರವನ್ನು ಮುಂದುವರಿಸಿದೆ.
ಒಟ್ಟಾರೆಯಾಗಿ, ಈ ನಿರ್ಧಾರದಿಂದ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ಕ್ರಿಮಿನಲ್ ಪ್ರಕರಣಗಳಿಂದ ಮುಕ್ತರಾಗಲಿದ್ದಾರೆ. ಆದರೆ, ವಿರೋಧ ಪಕ್ಷಗಳಿಂದ ಈ ನಿರ್ಧಾರದ ಬಗ್ಗೆ ಟೀಕೆ ವ್ಯಕ್ತವಾಗುವ ಸಾಧ್ಯತೆಯಿದೆ.








