ಮಂಡ್ಯ: ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿರುವ ಚಿಕಿತ್ಸೆ ಪಡೆಯುತ್ತಿರುವ ಕೆರೆಕಟ್ಟೆ ರಕ್ಷಣೆ ಖ್ಯಾತಿಯ ಕೆರೆ ಕಾಮೇಗೌಡರು ಆರೈಕೆ ಇಲ್ಲದೆ ಅನ್ನ, ನೀರು ಬಿಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದವರಾದ ಕಾಮೇಗೌಡರು, ಗ್ರಾಮದಲ್ಲಿ ಕಟ್ಟೆಗಳನ್ನ ನಿರ್ಮಿಸಿ ಪ್ರಖ್ಯಾತಿಯಾಗಿದ್ದಾರೆ.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಮೇಗೌಡರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಈ ನಡುವೆ ಕಾಲು ನೋವಿನಿಂದ ಬಳಲುತ್ತಿದ್ದ ಕಾಮೇಗೌಡರು ಚಿಕಿತ್ಸೆಗೆಂದು ಮಳವಳ್ಳಿ, ಮಂಡ್ಯ ಆಸ್ಪತ್ರೆಗಳಿಗೆ ಓಡಾಡಿದ್ದರು. ಈ ವೇಳೆ ಕೊರೊನಾ ಸೋಂಕು ಕಾಮೇಗೌಡರಿಗೂ ತಗುಲಿದ್ದು ಮಂಡ್ಯದ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾ ಪಾಸಿಟಿವ್ ಜೊತೆಗೆ ಕಾಲು ನೋವಿನಿಂದಲೂ ಬಳಲುತ್ತಿರುವ ಕಾಮೇಗೌಡರಿಗೆ ಮನೆಯಲ್ಲಿ ಶೌಚಾಲಯ ಸೇರಿದಂತೆ ಎಲ್ಲದಕ್ಕೂ ಮಕ್ಕಳನ್ನೇ ಅವಲಂಭಿಸಿದ್ದರು. ಇತ್ತ ಅವರ ಇಬ್ಬರು ಮಕ್ಕಳು ಹೋಂ ಕ್ವಾರಂಟೈನ್‍ನಲ್ಲಿರುವ ಕಾರಣ ಅವರಿಂದ ನೆರವೂ ಪಡೆಯಲು ಆಗುತ್ತಿಲ್ಲ. ಕಾಮೇಗೌಡರ ಮನೆಯಿರುವ ರಸ್ತೆಯನ್ನೂ ಸೀಲ್‍ಡೌನ್ ಮಾಡಲಾಗಿದೆ.
ಈಗ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಸಿಗುತ್ತಿದೆ. ಆದರೆ, ಸ್ನಾನ, ಶೌಚ ಸೇರಿದಂತೆ ನಿತ್ಯ ಕರ್ಮಗಳನ್ನು ಮಾಡಿಕೊಳ್ಳಲು ಕುಟುಂಬವರು ಇಲ್ಲದೆ ಕಾರಣ ಸಂಪೂರ್ಣವಾಗಿ ಕಾಮೇಗೌಡ ಸೊರಗಿದ್ದಾರೆ ಎನ್ನಲಾಗಿದೆ.
ಅನ್ನ, ಆಹಾರ ಸೇವಿಸಿದ್ರೆ ಶೌಚಾಲಯಕ್ಕೆ ಹೋಗಬೇಕಾಗುತ್ತೆ ಎಂಬ ಕಾರಣಕ್ಕೆ ಕಾಮೇಗೌಡರು ಆಹಾರ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರ: ಹೆಚ್‍ಡಿಕೆ ಕಳವಳ..!
ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯ ಸರ್ಕಾರ ತುರ್ತು ಚಿಕಿತ್ಸೆಗೆ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕಾಮೇಗೌಡರ ಬಗ್ಗೆ ಪ್ರಧಾನಿ, ಮುಖ್ಯಮಂತ್ರಿಗಳು ಹೊಗಳಿದ್ದಾರೆ. ಹೊಗಳಿ ಹೊನ್ನ ಶೂಲಕ್ಕೆ ಏರಿಸಿದರೆ ಸಾಲದು. ಅನಾರೋಗ್ಯದಿಂದ ಅವರು ಸೋತು ಸುಣ್ಣವಾಗಿರುವಾಗ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಕಾಮೇಗೌಡರು ಶೀಘ್ರ ಗುಣಮುಖರಾಗಲಿ: ಸಚಿವ ಸುಧಾಕರ್
ಕೆರೆ ಕಾಮೇಗೌಡರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ವೈದ್ಯಕೀಯ ಕಾಲೇಜಿನ ನಿರ್ದೇಶಕರಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದೇನೆ. ಇಡೀ ದೇಶಕ್ಕೆ ಸ್ಫೂರ್ತಿಯಾಗಿರುವ ಕಾಮೇಗೌಡರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.









