ಕೀಪಿಂಗ್ ನಲ್ಲಿ ರಿಷಬ್ ಪಂತ್ ಇನ್ನೂ ತೊಟ್ಟಿಲಿನ ಮಗು – ಸಯ್ಯದ್ ಕೀರ್ಮಾನಿ ಅಭಿಮತ..!
ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ /ವಿಕೆಟ್ ಕೀಪರ್ ರಿಷಬ್ ಪಂತ್ ಪ್ರತಿಭಾನ್ವಿತ ಬ್ಯಾಟ್ಸ್ ಮೆನ್. ಆತನ ಪ್ರತಿಭೆ ದೈವದತ್ತವಾಗಿ ಬಂದಿದೆ. ಆದ್ರೆ ವಿಕೆಟ್ ಕೀಪಿಂಗ್ ನಲ್ಲಿ ಇನ್ನೂ ಆತ ತೊಟ್ಟಿಲಿನಲ್ಲಿರುವ ಮಗು ಎಂದು ಮಾಜಿ ಕ್ರಿಕೆಟಿಗ ಸಯ್ಯದ್ ಕೀರ್ಮಾನಿ ಅಭಿಪ್ರಾಯಪಟ್ಟಿದ್ದಾರೆ. ಸಯ್ಯದ್ ಕೀರ್ಮಾನಿ ಅವರು ಭಾರತ ಕಂಡ ಅದ್ಭುತ ವಿಕೆಟ್ ಕೀಪರ್. 1983ರ ವಿಶ್ವ ಕಪ್ ಗೆದ್ದ ತಂಡದಲ್ಲಿದ್ದ ಸಯ್ಯದ್ ಕೀರ್ಮಾನಿ ಅವರು, ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು.
ರಿಷಬ್ ಪಂತ್ ಅದ್ಭುತ ಬ್ಯಾಟ್ಸ್ ಮೆನ್ ಎಂಬುದರಲ್ಲಿ ಎರಡು ಮಾತಿಲ್ಲ. ತನ್ನ ನೈಜ ಆಟದಿಂದ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದರು. ಹಾಗೇ ತನ್ನ ಅಮೋಘ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾಗೆ ಕೆಲವೊಂದು ಪಂದ್ಯಗಳನ್ನು ಗೆಲ್ಲಲು ಕೂಡ ಸಹಕರಿಸಿದ್ದಾರೆ. ಆದ್ರೆ ರಿಷಬ್ ಪಂತ್ ಸಾಕಷ್ಟು ಕಲಿಯಬೇಕಿದೆ ಎಂದು ಹೇಳಿದ್ದಾರೆ.
80 -90ರ ಗಡಿಯಲ್ಲಿದ್ದಾಗ ಬ್ಯಾಟ್ಸ್ ಮೆನ್ ಚಿತ್ತ ಶತಕದತ್ತ ಇರಬೇಕು. ಆ ಸಂದರ್ಭದಲ್ಲಿ ತಾಳ್ಮೆಯಿಂದ ಆಡಬೇಕು. ತಾನು ನೈಜ ಆಟಗಾರ ಅಂತ ಅದೇ ಲಯದಲ್ಲಿ ಆಡಬಾರದು. ಈ ಸಮಯದಲ್ಲಿ ಸ್ವಲ್ಪ ಸವಾಲುಗಳನ್ನು ಸ್ವೀಕರಿಸಬೇಕು. ತಂಡದ ಪರಿಸ್ಥಿತಿಯನ್ನು ಅರಿತುಕೊಂಡು ಬ್ಯಾಟ್ ಬೀಸಬೇಕು ಎಂದು ಸಯ್ಯದ್ ಕೀರ್ಮಾನಿ ಅವರು ಸಲಹೆ ನೀಡಿದ್ದಾರೆ.
ಇನ್ನು ರಿಷಬ್ ಪಂತ್ ಕೀಪಿಂಗ್ ನಲ್ಲಿ ಬೇಸಿಕ್ ಟೆಕ್ನಿಕ್ಸ್ ಗಳಿಲ್ಲ. ಆತ ಸಾಕಷ್ಟು ಕಲಿಯಲು ಇದೆ. ಬೌಲಿಂಗ್ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೀಪಿಂಗ್ ಮಾಡಬೇಕು ಎಂದು ಹೇಳಿದ್ದಾರೆ.
ಅಂದ ಹಾಗೇ ರಿಷಬ್ ಪಂತ್ ಕಳೆದ ಮೂರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಶತಕ ದಾಖಲಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ 97 ರನ್ ಮತ್ತು 89 ರನ್ ಗಳಿಗೆ ತನ್ನ ವಿಕೆಟ್ ಗಳನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲೂ ಶತಕ ದಾಖಲಿಸುವಂತಹ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.